ಶಿವಮೊಗ್ಗ: ಭಾರತೀಯ ಸೇನೆ, ಅರೆಸೇನಾ ಪಡೆ, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಹಾಗೂ ಪೊಲೀಸ್ ಇಲಾಖೆಯ ನಂತರ ಇದೀಗ ಅರಣ್ಯ ಇಲಾಖೆಯಲ್ಲೂ ಮುಧೋಳ ತಳಿಯ ಶ್ವಾನಗಳು ಹೆಜ್ಜೆಗುರುತು ಮೂಡಿಸುತ್ತಿವೆ. ಅರಣ್ಯ ಪ್ರದೇಶದಲ್ಲಿ ಗಸ್ತು ಕಾರ್ಯಕ್ಕೆ ಈ ತಳಿಯ ನಾಯಿಗಳನ್ನು ಬಳಕೆ ಮಾಡುವ ಪ್ರಯೋಗ ಶಿಕಾರಿಪುರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.
ಶಿಕಾರಿಪುರ ತಾಲ್ಲೂಕಿನ ಚಂದ್ರಕಲಾ ರಾಜ್ಯ ಮೀಸಲು ಅರಣ್ಯದಲ್ಲಿ ಶ್ರೀಗಂಧದ ಮರಗಳ ರಕ್ಷಣೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ತಿಮ್ಮಾಪುರದ ಮುಧೋಳ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಿಂದ ಮೂರು ವರ್ಷಗಳ ಹಿಂದೆ ತಂದಿರುವ ಚಂದ್ರ ಹಾಗೂ ಕಲಾ ಹೆಸರಿನ ಎರಡು ಶ್ವಾನಗಳು ಬಳಕೆ ಆಗುತ್ತಿವೆ. ಶಿರಾಳಕೊಪ್ಪದ ಬಳಿ ಶ್ರೀಗಂಧ ನೆಡುತೋಪು ಕಾಯಲು ಮತ್ತೊಂದು ಮುಧೋಳ ನಾಯಿ ನಿಯೋಜಿಸಲಾಗಿದೆ.
‘ಅರಣ್ಯದ ದುರ್ಗಮ ಪ್ರದೇಶದಲ್ಲಿ ಹಾಗೂ ಕಣ್ಣಳತೆಯಿಂದ ದೂರದಲ್ಲಿ ಹೊಸದಾಗಿ ಏನಾದರೂ ಚಟುವಟಿಕೆ ನಡೆದಿದ್ದರೆ, ಯಾರಾದರೂ ಅಡಗಿಕೊಂಡಿದ್ದರೆ ಗ್ರಹಿಸಿ ಅಲ್ಲಿಗೆ ತೆರಳಿ ಬೊಗಳುವ ಮೂಲಕ ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿಗೆ ಈ ನಾಯಿಗಳು ಸೂಚನೆ ಕೊಡುತ್ತವೆ. ಹೀಗಾಗಿ ಅವು ಕಳ್ಳ ಬೇಟೆಗಾರರಿಗೆ, ಮರಗಳ್ಳರಿಗೆ ಸಿಂಹಸ್ವಪ್ನವಾಗಿವೆ’ ಎಂದು ಶಿಕಾರಿಪುರ ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ತರಬೇತಿ ಕೊಡಬೇಕಿದೆ
‘ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ವನ್ಯಜೀವಿ ಪ್ರಕರಣಗಳ ಪತ್ತೆಗೆ ತರಬೇತಿ ಕೊಟ್ಟ ಜರ್ಮನ್ ಶೆಫರ್ಡ್ ತಳಿ ನಾಯಿಗಳ ಬಳಕೆ ಮಾಡಲಾಗುತ್ತಿದೆ. ಗಸ್ತು ಕಾರ್ಯದಲ್ಲಿ ಯಶಸ್ವಿಯಾಗಿ ಕೈ ಜೋಡಿಸಿರುವ ಮುಧೋಳ ತಳಿಗಳಿಗೂ ತರಬೇತಿಯ ಅಗತ್ಯವಿದೆ. ಮರಗಳ ವಾಸನೆ ಗ್ರಹಿಸಿ ಅವುಗಳನ್ನು ಕಡಿದು ಬಚ್ಚಿಟ್ಟಿದ್ದರೆ ಹುಡುಕಿ ಪತ್ತೆ ಮಾಡುವ ಕೆಲಸಕ್ಕೂ ತರಬೇತಿ ಕೊಡಬಹುದು’ ಎಂದು ಅವರು ಹೇಳುತ್ತಾರೆ.
ಆರಂಭದಲ್ಲಿ ಈ ಶ್ವಾನಗಳು ಬಸವಪುರದ ಬಳಿ ಅರಣ್ಯ ಭೂಮಿ ಕಬಳಿಕೆ ತಡೆಯಲು ಬಳಕೆ ಅಗುತ್ತಿದ್ದವು. ನಂತರ ಗಸ್ತು ಕಾರ್ಯಕ್ಕೆ ಬಳಕೆ ಆರಂಭಿಸಲಾಯಿತು. ಸುರಗಿಹಳ್ಳಿ ಬಳಿ ಅರಣ್ಯ ಇಲಾಖೆಯಿಂದ ವಿಶೇಷ ಗೂಡುಗಳನ್ನು ಸಿದ್ಧಪಡಿಸಲಾಗಿದೆ. ವಾಚರ್ ಬೀರಪ್ಪ ಅವರ ಮೇಲ್ವಿಚಾರಣೆಯಲ್ಲಿ ಅವುಗಳಿಗೆ ಅಲ್ಲಿಯೇ ಅನ್ನ, ಹಾಲು, ಮೊಟ್ಟೆ, ಚಿಕನ್ ಹಾಗೂ ವಾರಕ್ಕೊಮ್ಮೆ ಮಟನ್ ಊಟೋಪಚಾರ ನಡೆಯುತ್ತಿದೆ.
ಮೆಚ್ಚುಗೆ
ಆಗಸ್ಟ್‌ನಲ್ಲಿ ಶಿಕಾರಿಪುರಕ್ಕೆ ಬಂದಿದ್ದ ತರಬೇತಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ ಅವರು ಮುಧೋಳ ತಳಿಯ ಶ್ವಾನಗಳ ಕಾರ್ಯವೈಖರಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ತಳಿಯ ನಾಯಿಗಳಿಗೆ ತರಬೇತಿ ಕೊಟ್ಟು ಇಲಾಖೆಯ ಕಳ್ಳಬೇಟೆ ತಡೆ ಕ್ಯಾಂಪ್‌ಗಳಲ್ಲಿ ಇರಿಸುವ ಇರಾದೆ ವ್ಯಕ್ತಪಡಿಸಿದ್ದಾರೆ ಎಂದು ಶಿವಮೊಗ್ಗ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ ಹೇಳುತ್ತಾರೆ.
ಗಸ್ತು ವೇಳೆ ವಿಪರೀತ ಚುರುಕು ಹಾಗೂ ಜಾಗೃತ ಸ್ಥಿತಿಯ ವರ್ತನೆ ತೋರುವ ಮುಧೋಳ ತಳಿಯ ಶ್ವಾನಗಳು ಚಂದ್ರಕಲಾ ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆಗಾರರಿಗೆ ಹಾಗೂ ಮರಗಳ್ಳರಿಗೆ ಸಿಂಹಸ್ವಪ್ನವಾಗಿವೆ.– ರೇವಣಸಿದ್ದಯ್ಯ ಹಿರೇಮಠ, ಶಿಕಾರಿಪುರ ವಲಯ ಅರಣ್ಯಾಧಿಕಾರಿ
ಚಂದ್ರಕಲಾ ಅರಣ್ಯದಲ್ಲಿ ಗಸ್ತು ಕಾರ್ಯಕ್ಕೆ ಮುಧೋಳ ತಳಿ ಶ್ವಾನಗಳ ಬಳಕೆಯಿಂದ ಅರಣ್ಯ ಸಿಬ್ಬಂದಿಗೆ ಹೆಚ್ಚುವರಿ ಶಕ್ತಿ ಕೊಟ್ಟಂತಾಗಿದೆ. ಇದರಿಂದ ಶ್ರೀಗಂಧದ ಮರಗಳ ಸಂರಕ್ಷಣೆ ಕಟ್ಟುನಿಟ್ಟಾಗಿ ಆಗುತ್ತಿದೆ.– ಡಾ.ಕೆ.ಟಿ.ಹನುಮಂತಪ್ಪ, ಶಿವಮೊಗ್ಗ ವಿಭಾಗದ ಸಿಸಿಎಫ್
ಶ್ರೀಗಂಧದ ಆಗರ ಚಂದ್ರಕಲಾ ಅರಣ್ಯ
ಶಿಕಾರಿಪುರ ತಾಲ್ಲೂಕಿನಲ್ಲಿ ವ್ಯಾಪಿಸಿರುವ ಚಂದ್ರಕಲಾ ರಾಜ್ಯ ಮೀಸಲು ಅರಣ್ಯ ಪ್ರದೇಶ 3169 ಹೆಕ್ಟೇರ್ ವ್ಯಾಪ್ತಿ (7832 ಎಕರೆ) ಹೊಂದಿದೆ. ಈ ಹಿಂದೆ ಇಲ್ಲಿಗೆ ಮೈಸೂರು ಅರಸರು ಹೈದರ್ ಅಲಿ ಶಿಕಾರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ನೈಸರ್ಗಿಕವಾಗಿ ಬೆಳೆದ ಹಾಗೂ ನೆಡುತೋಪಿನಲ್ಲಿ ಪೋಷಿಸುತ್ತಿರುವ 12000ಕ್ಕೂ ಅಧಿಕ ಶ್ರೀಗಂಧದ ಮರಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಅರಣ್ಯ ಇಲಾಖೆಯದ್ದಾಗಿದೆ. ಶ್ರೀಗಂಧ ಸಂಪತ್ತು ರಕ್ಷಣೆಗೆ ಕಾವಲು ಸಿಬ್ಬಂದಿಯ (ವಾಚರ್) ಜೊತೆಗೆ ಸಿ.ಸಿ. ಟಿವಿ ಕ್ಯಾಮೆರಾಗಳು 7.5 ಕಿ.ಮೀ ವಿಸ್ತೀರ್ಣದ ಚೈನ್ ಲಿಂಕ್ ಮೆಶ್ ಜೊತೆಗೆ ಕಳೆದ ಮೂರು ವರ್ಷಗಳಿಂದ ಮುಧೋಳ ತಳಿಯ ಶ್ವಾನಗಳು ಬಳಕೆ ಆಗುತ್ತಿವೆ ಎಂದು ಸಿಬ್ಬಂದಿ ಹೇಳುತ್ತಾರೆ.
ಮದ್ಯದ ಕವರ್‌ನಿಂದ ಮರಗಳ್ಳರ ಪತ್ತೆ
ಎರಡು ವರ್ಷಗಳ ಹಿಂದೆ ಮರಗಳ್ಳರ ತಂಡ ಕಾಡಿನಲ್ಲಿಯೇ ಉಳಿದು ಶ್ರೀಗಂಧ ಕದಿಯಲು ನೋಡಿತ್ತು. ಅವರೆಲ್ಲರೂ ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿದ್ದರು. ಈ ವೇಳೆ ಮದ್ಯ ಕೂಡ ಸೇವಿಸಿದ್ದರು. ಆ ಸ್ಥಳವನ್ನು ಮುಧೋಳ ಶ್ವಾನ ಚಂದ್ರ ಪತ್ತೆ ಮಾಡಿದ್ದ. ಅಲ್ಲಿ ದೊರೆತ ಮದ್ಯದ ಟೆಟ್ರಾಪ್ಯಾಕ್‌ನ ಸಂಖ್ಯೆ ಆಧರಿಸಿ ಅದು ಎಲ್ಲಿ ಖರೀದಿ ಆಗಿತ್ತು ಎಂಬುದನ್ನು ಪರಿಶೀಲಿಸಿ ಕೊನೆಗೆ ಕಳ್ಳರ ತಂಡ ಪತ್ತೆ ಮಾಡಿದ್ದೆವು ಎಂದು ಅಧಿಕಾರಿಗಳು ಸ್ಮರಿಸುತ್ತಾರೆ.
ದೂಪದಾಳ ನೆಡುತೋಪು ಬಳಿ ರಾತ್ರಿ ವೇಳೆ ತಂಡವೊಂದು ಶ್ರೀಗಂಧ ಕದಿಯುತ್ತಿತ್ತು. ಆಗಸ್ಟ್ 11ರಂದು ಅವರ ಚಲನವಲನ ಗಮನಿಸಿದ್ದ ಮುಧೋಳ ತಳಿ ನಾಯಿಯು ಬೊಗಳಿ ವಾಚರ್‌ಗಳನ್ನು ಎಚ್ಚರಿಸಿತ್ತು. ಆಗ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಸಿಬ್ಬಂದಿ ಮರಗಳ್ಳರ ತಂಡದ ಒಬ್ಬನನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.