ADVERTISEMENT

ಶಿವಮೊಗ್ಗ: ಭಕ್ತಿ ಭಾವದ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:00 IST
Last Updated 7 ಜುಲೈ 2025, 5:00 IST
<div class="paragraphs"><p>ಶಿವಮೊಗ್ಗದ ರಾಗಿಗುಡ್ಡದ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ಅಲಾಯಿ ದೇವರುಗಳನ್ನು ಹೊತ್ತು ಸಾಗಿದರು</p></div>

ಶಿವಮೊಗ್ಗದ ರಾಗಿಗುಡ್ಡದ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ಅಲಾಯಿ ದೇವರುಗಳನ್ನು ಹೊತ್ತು ಸಾಗಿದರು

   

ಶಿವಮೊಗ್ಗ: ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಸಮುದಾಯದವರು ಜಿಲ್ಲೆಯಾದ್ಯಂತ ಭಕ್ತಿ–ಭಾವದಿಂದ ಆಚರಿಸಿದರು. 

ನಗರದ ವಿವಿಧೆಡೆ ಹೂವು, ಹೊಸ ಬಟ್ಟೆಯಿಂದ ಸಿಂಗರಿಸಿದ ಪಂಜಾ (ಕೈ) ಪ್ರತಿಕೃತಿಗಳನ್ನು ಹೊತ್ತು ಮೆರವಣಿಗೆ ನಡೆಸಿದರು. ಮಹಾವೀರ ವೃತ್ತದ ದರ್ಗಾದಿಂದ ಸಾಗಿದ ಮೆರವಣಿಗೆ ಟಿ.ಸೀನಪ್ಪ ಶೆಟ್ಟಿ ವೃತ್ತ, ನೆಹರೂ ರಸ್ತೆ, ಅಮೀರ್ ಅಹಮ್ಮದ್ ವೃತ್ತದ ಮೂಲಕ ಮತ್ತೆ ಮಹಾವೀರ ವೃತ್ತಕ್ಕೆ ಬಂದಿತು.

ADVERTISEMENT

ಅಮೀರ್ ಅಹಮ್ಮದ್ ವೃತ್ತದ ಮಸೀದಿಯಲ್ಲಿ ಪಂಜಾ ಪ್ರತಿಷ್ಠಾಪಿಸಿದ ಮುಸ್ಲಿಂ ಸಮುದಾಯದವರು ತ್ಯಾಗ, ಬಲಿದಾನ ಮಾಡಿದವರನ್ನು ಪ್ರಾರ್ಥನೆ ಮೂಲಕ ಸ್ಮರಿಸಿದರು. ಬೆಳಿಗ್ಗೆಯಿಂದ ಪ್ರಮುಖ ವೃತ್ತ, ರಸ್ತೆ ಬದಿಗಳಲ್ಲಿ ಪಾನಕ ವಿತರಿಸಲಾಯಿತು.

ಇಲ್ಲಿನ ರಾಗಿಗುಡ್ಡ ಸಮೀಪದ ಮುಖ್ಯ ರಸ್ತೆಯ ಮಸೀದಿ ಎದುರು ಕೆಂಡ ತುಳಿಯುವ ಮೂಲಕ ಮುಸ್ಲಿಂ ಯುವಕರು ಹಬ್ಬ ಆಚರಿಸಿದರು. ಅಲಾಯಿ ದೇವರುಗಳನ್ನು ಹೊತ್ತು ಸಾಗಿದರು.

ತ್ಯಾಗ, ಬಲಿದಾನ ಮತ್ತು ಭಾವೈಕ್ಯತೆ ಸಾರುವ ಹಬ್ಬದಲ್ಲಿ ಮಸೀದಿ ಮತ್ತು ದರ್ಗಾ ಹಾಗೂ ಮನೆಗಳಲ್ಲಿ ಪಂಜಾಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಹಬ್ಬದ ಅಂಗವಾಗಿ ಮುಸ್ಲಿಮರು ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. 

ಪ್ರತಿ ಧರ್ಮದಲ್ಲೂ ಹೊಸ ವರ್ಷದ ಆಚರಣೆ ಇದೆ. ಹಿಂದೂ ಧರ್ಮದಲ್ಲಿ ಚಾಂದ್ರಮಾನ ಯುಗಾದಿ, ಕ್ರೈಸ್ತರಲ್ಲಿ ಜನವರಿ ತಿಂಗಳ ಮೊದಲ ದಿನದ ರೀತಿಯಲ್ಲೇ ಇಸ್ಲಾಂ ಧರ್ಮದಲ್ಲಿ ಮೊಹರಂ ತಿಂಗಳ ಮೊದಲ ದಿನವೇ ಹೊಸ ವರ್ಷದ ಆರಂಭ ಎಂದೇ ಪರಿಗಣಿಸಲಾಗುತ್ತದೆ. 

ಅಮಾವಾಸ್ಯೆ ನಂತರ ಚಂದ್ರನ ದರ್ಶನವಾದ ದಿನದಿಂದಲೇ ಮೊಹರಂ ಆರಂಭವಾಗುತ್ತದೆ. ಪ್ರವಾದಿ ಹಜರತ್ ಮಹಮದ್ ಪೈಗಂಬರ್ ಮೊಮ್ಮಕ್ಕಳಾದ ಹಜರತ್ ಇಮಾಂ ಹಸನ್ ಮತ್ತು ಇಮಾಂ ಹುಸೇನ್ ಇಸ್ಲಾಂ ಧರ್ಮದ ರಕ್ಷಣೆಗಾಗಿ ಹೋರಾಡಿ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಅವರ ತ್ಯಾಗ ಮತ್ತು ಬಲಿದಾನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಸ್ಲಿಮರು ಮೊಹರಂ  ಆಚರಿಸುತ್ತಾರೆ. 

ಶಿಕಾರಿಪುರ: ಬಂಜಾರರಿಂದ ಮೊಹರಂ ಆಚರಣೆ 

ಶಿಕಾರಿಪುರ ಪಟ್ಟಣ ಸೇರಿದಂತೆ ಶೀರಿಹಳ್ಳಿ ತಾಂಡದ ಬಂಜಾರ ಸಮುದಾಯ ಹಾಗೂ ಕಪ್ಪನಹಳ್ಳಿ ಗ್ರಾಮದಲ್ಲಿ ಭಾವೈಕ್ಯತೆಯ ಮೊಹರಂ ಆಚರಿಸಲಾಯಿತು.

ಮುಸ್ಲಿಂ ಸಮುದಾಯದವರೇ ಇಲ್ಲದ ಶೀರಿಹಳ್ಳಿ ತಾಂಡದ ಬಂಜಾರ ಸಮುದಾಯದರು ಶ್ರದ್ಧಾ ಭಕ್ತಿಯಿಂದ ಮೊಹರಂ ಆಚರಿಸಿದರು.

ಮೂರು ದಿನಗಳವರೆಗೆ ಅಲಾಯಿ ದೇವರನ್ನ ಇಟ್ಟು ಪೂಜೆ ಮಾಡಲಾಗುತ್ತದೆ. ಮೂರನೇ ದಿನದಂದು ಅದ್ದೂರಿ ಮೆರವಣಿಗೆ ಮಾಡಿ, ಬಂಜಾರ ಸಂಪ್ರದಾಯ ದಂತೆ ಹಾಡು, ಭಜನೆ ಮೂಲಕ ಪೂಜೆ ಮಾಡಿ ಜನರು ಭಕ್ತಿ ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.