ADVERTISEMENT

ಶಾಸಕರ ಕೈಗೊಂಬೆಯಾದ ನಗರಸಭೆ ಅಧ್ಯಕ್ಷೆ: ಸದಸ್ಯೆ ಎನ್.ಲಲಿತಮ್ಮ ಆರೋಪ‍

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 7:04 IST
Last Updated 25 ಸೆಪ್ಟೆಂಬರ್ 2021, 7:04 IST
ಎನ್. ಲಲಿತಮ್ಮ
ಎನ್. ಲಲಿತಮ್ಮ   

ಸಾಗರ: ‘ಇಲ್ಲಿನ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅವರು ತಮ್ಮ ಆಡಳಿತದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಶಾಸಕ ಎಚ್. ಹಾಲಪ್ಪ ಹರತಾಳು ಅವರ ಮಾತನ್ನು ಕೇಳುತ್ತಿದ್ದಾರೆ. ಅಧ್ಯಕ್ಷರು ಶಾಸಕರ ಕೈಗೊಂಬೆಯಾಗಿದ್ದಾರೆ’ ಎಂದು ನಗರಸಭೆ ಸದಸ್ಯೆ ಎನ್. ಲಲಿತಮ್ಮ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 11ತಿಂಗಳು ಕಳೆದಿದೆ. ನಗರಸಭೆ ಅಧ್ಯಕ್ಷರು ಆಡಳಿತಕ್ಕೆ ಸಂಬಂಧಪಟ್ಟಂತೆ ಯಾವುದೇ ನಿರ್ಣಯಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಎಲ್ಲವೂಶಾಸಕರ ಆಣತಿಯಂತೆ ನಡೆಯುತ್ತಿದೆ. ಹೀಗಾದರೆ ಅಧ್ಯಕ್ಷ ಸ್ಥಾನದ ಘನತೆ ಉಳಿಯುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ನಗರಸಭೆಯಲ್ಲಿ ನಡೆದಿರುವ ಆಶ್ರಯ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆಡಳಿತದಲ್ಲಿದ್ದಾಗಲೇ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರಬರೆಯಲಾಗಿತ್ತು. ತನಿಖೆ ನಡೆದು ಆಶ್ರಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಎಂಬ ನೌಕರ ಅಮಾನತು ಕೂಡ ಆಗಿದ್ದರು. ಆದರೂ ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ತನಿಖೆ ಆಗಿಲ್ಲ ಎನ್ನುವಂತೆ ಬಿಜೆಪಿ ಮುಖಂಡರು ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ದೂರಿದರು.

ADVERTISEMENT

ಈಚೆಗೆ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಶ್ರಯ ಹಗರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಕೂಡ ತನಿಖೆಗೆ ಒತ್ತಾಯಿಸಿದ್ದಾರೆ. ಆದರೂ ತನಿಖೆ ಯಾವ ಸ್ವರೂಪದಲ್ಲಿರಬೇಕು ಎಂಬ ನಿರ್ಣಯವನ್ನು ಸ್ವತಃ ತೆಗೆದುಕೊಳ್ಳಲಾಗದ ಅಧ್ಯಕ್ಷರು ಶಾಸಕರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ. ನಗರಸಭೆ ಅಧ್ಯಕ್ಷರು ಶಾಸಕರ ರಬ್ಬರ್ ಸ್ಟಾಂಪ್ ಆಗಿದ್ದಾರೆ ಎಂದು ಟೀಕಿಸಿದರು.

ನಗರವ್ಯಾಪ್ತಿಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡ 332 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಶಾಸಕರು ಅರ್ಹರಿಗೆ ಹಕ್ಕುಪತ್ರ ಕೊಡಿಸುವ ಕೆಲಸವನ್ನು ಈವರೆಗೂ ಮಾಡಿಲ್ಲ. ನಗರಸಭೆಯಿಂದ ಕಿಟ್, ಪರಿಹಾರಧನ ವಿತರಿಸುವ ಕಾರ್ಯಕ್ರಮ ಶಾಸಕರ ಉಪಸ್ಥಿತಿಯಲ್ಲೇ ನಡೆಯಬೇಕು ಎಂಬ ಅಘೋಷಿತ ನಿಯಮವನ್ನು ಜಾರಿಗೊಳಿಸಲಾಗಿದೆ. ಇಂತಹ ವಿಷಯಗಳನ್ನು ಬಿಟ್ಟು ಶಾಸಕರು ಹಕ್ಕುಪತ್ರ ವಿತರಣೆಗೆ ಆಸಕ್ತಿ ತೋರಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ‘ಕ್ಷೇತ್ರದ ಶಾಸಕರು ಕೆಲಸಗಳಿಗಿಂತ ಹೆಚ್ಚಾಗಿ ಪ್ರಚಾರದ ಹಿಂದೆ ಬಿದ್ದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಗರಸಭೆಯಿಂದ ವಿತರಿಸಲಾದ ಕಿಟ್‌ ಮೇಲೆ ಶಾಸಕರು ತಮ್ಮ ಭಾವಚಿತ್ರ ಹಾಕಿಸಿಕೊಂಡಿದ್ದಾರೆ. ನಗರವ್ಯಾಪ್ತಿಯಲ್ಲಿ ಬೀಡಾಡಿ ದನಗಳ, ಬೀದಿ ನಾಯಿ, ಮಂಗಗಳ ಕಾಟ ವಿಪರೀತವಾಗಿದೆ. ನಗರಸಭೆ ಆಡಳಿತ ಇದನ್ನು ತಡೆಗಟ್ಟುವ ಬದಲು ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ’ ಎಂದು ಟೀಕಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್. ಸುರೇಶ್ ಬಾಬು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಧುಮಾಲತಿ, ಸದಸ್ಯರಾದ ಗಣಪತಿ ಮಂಡಗಳಲೆ, ಉಮೇಶ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.