ADVERTISEMENT

ರಾಜ್ಯದಲ್ಲಿ ಎರಡನೇ ಟಿಪ್ಪುಸುಲ್ತಾನನ ದರ್ಬಾರು: ಎನ್. ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:44 IST
Last Updated 11 ಸೆಪ್ಟೆಂಬರ್ 2025, 4:44 IST
ಎನ್. ರವಿಕುಮಾರ್
ಎನ್. ರವಿಕುಮಾರ್   

ಶಿವಮೊಗ್ಗ: ‘ರಾಜ್ಯದಲ್ಲಿ ಎರಡನೇ ಟಿಪ್ಪುಸುಲ್ತಾನನ ದರ್ಬಾರು ನಡೆಯುತ್ತಿದೆ. ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಮುಸ್ಲಿಂರ ತುಷ್ಠೀಕರಣದ ಪರಾಕಾಷ್ಠೆ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆರೋಪಿಸಿದರು.

ಗಣೇಶ ಹಬ್ಬ ಆಚರಣೆಗೆ ಕಾಂಗ್ರೆಸ್ ಸರ್ಕಾರ ವಿಘ್ನವಾಗಿ ಕಾಡುತ್ತಿದೆ. ಗಣಪತಿಯು ವಿಘ್ನ ನಿವಾರಕನಾಗಿ ಬಿಡುಗಡೆ ಪಡೆಯಲು ಆದಷ್ಟು ಬೇಗ ಸರ್ಕಾರ ತೊಲಗಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಉನ್ನತ ಸ್ಥಾನದಲ್ಲಿದ್ದಾರೆ. ಇವರ ಏಳಿಗೆಗ ಹಿಂದೂ ಸಂಸ್ಕೃತಿಯ ಪಾತ್ರವೂ ಇದೆ. ಆದರೆ, ಅವರು ‘ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ. ಇದು ಹಿಂದೂ ಧರ್ಮಕ್ಕಿಂತಲೂ ಶ್ರೇಷ್ಠ ಎನ್ನುವುದಾದರೆ ಅವರು, ಮುಸ್ಲಿಂ ಧರ್ಮಕ್ಕೆ ಸೇರುವುದು ಉತ್ತಮ ಎಂದು ಸಲಹೆ ನೀಡಿದರು.

ADVERTISEMENT

ಮದ್ದೂರಿನ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಪೂರ್ವ ನಿಯೋಜಿತ ಕೃತ್ಯ. ಕೆಲವು ಮುಸ್ಲಿಮರೂ ಈ ಘಟನೆಯನ್ನು ಖಂಡಿಸಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಇದು ಬಿಜೆಪಿ ಹಾಗೂ ಬಜರಂಗದಳದ ಕುಮ್ಮಕ್ಕು ಎಂದು ಆರೋಪಿಸಿದ್ದಾರೆ. ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರವೇ ವಿನಃ, ಬೇರೆ ಯಾವುದೇ ಸಂಘಟನೆಯಲ್ಲ. ಕೆಲವು ಕಿಡಿಗೇಡಿಗಳ ಮೇಲಿದ್ದ ಈ ಹಿಂದಿನ ಪ್ರಕರಣಗಳನ್ನು ವಜಾಗೊಳಿಸಿ ಸರ್ಕಾರವೇ ಕೃತ್ಯ ಎಸಗಲು ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದೆ’ ಎಂದು ಹೇಳಿಕೆಕೊಂಡು ಕಿಡಿಗೇಡಿಗಳು ನಿರ್ಭಯದಿಂದ ಓಡಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೇ ಬೇಕು. ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.  

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎನ್.ಕೆ. ಜಗದೀಶ್, ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಶಿವರಾಜ, ಸಿದ್ಧಲಿಂಗಪ್ಪ, ಮಾಲತೇಶ್, ಕುಪೇಂದ್ರ, ಸುಧಾಕರ್, ಹರೀಶ್, ಮಂಗಳಾ ನಾಗೇಂದ್ರ, ನಿವೇದಿತಾ ರಾಜು ಇದ್ದರು. 

‘ಡಿಜೆ ಬಳಸಲು ಅವಕಾಶ ನೀಡಿ’

‘ಹಿಂದೂ ಹಬ್ಬಗಳ ಮೇಲೆ ದಬ್ಬಾಳಿಕೆ ಸರಿಯಲ್ಲ. ಗಣಪತಿ ಮೆರವಣಿಗೆಯಲ್ಲಿ ಡಿಜೆ ಬಳಸಲು ಸರ್ಕಾರ ಅವಕಾಶ ನೀಡಬೇಕು. ಸಮಸ್ಯೆ ಕಂಡು ಬಂದ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಿ. ಹಿಂದೂಗಳ ಮೇಲೆ ಇದೇ ಧೋರಣೆ ನಡೆಯುತ್ತಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ. ಸರ್ಕಾರ ತನ್ನ ಮನಸ್ಥಿತಿ ಬದಲಿಸಿಕೊಳ್ಳಬೇಕು’ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.