ADVERTISEMENT

ಕಲ್ಲು ನಾಗರ ಮೂರ್ತಿಗಳಿಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 3:12 IST
Last Updated 30 ಜುಲೈ 2025, 3:12 IST
ರಿಪ್ಪನ್‌ಪೇಟೆಯ ಶಬರೀಶ ನಗರದ ಬಳಿಯ ನಾಗರಬನಕ್ಕೆ ಭಕ್ತರು ಹಾಲೆರೆದು ಪೂಜಿಸಿದರು
ರಿಪ್ಪನ್‌ಪೇಟೆಯ ಶಬರೀಶ ನಗರದ ಬಳಿಯ ನಾಗರಬನಕ್ಕೆ ಭಕ್ತರು ಹಾಲೆರೆದು ಪೂಜಿಸಿದರು   

ರಿಪ್ಪನ್ ಪೇಟೆ: ಪಟ್ಟಣ ಸೇರಿದಂತೆ ಕೆರೆಹಳ್ಳಿ ಹಾಗೂ ಹೊಂಬುಜ ಹೋಬಳಿ ವ್ಯಾಪ್ತಿಯ ವಿವಿಧೆಡೆ ಶ್ರದ್ಧಾ ಭಕ್ತಿಯಿಂದ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.  

ಹಲವರು ತಮ್ಮ ತೋಟ, ಹೊಲ– ಗದ್ದೆಯಲ್ಲಿರುವ ನಾಗರ ಹುತ್ತಕ್ಕೆ ತನಿ ಎರೆಯುವ ಮೂಲಕ ಪೂಜೆ ಸಲ್ಲಿಸಿದರೆ, ಕೆಲವರು ದೇವಸ್ಥಾನದ ಆವರಣದಲ್ಲಿರುವ ಅರಳಿ ಮರದ ಬುಡದಲ್ಲಿನ ನಾಗರ ಮೂರ್ತಿಗಳಿಗೆ ಹಾಲೆರೆದರು.  

ಪಟ್ಟಣದ ಸಿದ್ಧಿವಿನಾಯಕ ದೇವಸ್ಥಾನದ ಎದುರಿನ ಅರಳಿ ಕಟ್ಟೆ, ತಿಲಕ್ ನಗರದ ನಾಗ ದೇವರು ಮತ್ತು ರಕ್ತೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ, ಶಬರೀಶ್ ನಗರದ ಕೀರ್ತಿ ಫಾರಂ ಹೌಸ್‌ನ ನಾಗರಕಟ್ಟೆ, ಮುಗುಡ್ತಿ ಬಲಮುರಿ ಗಣಪತಿ ದೇವಸ್ಥಾನ ಎದುರಿನ ನಾಗರಕಟ್ಟೆ, ಶಿವಪುರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ರಾಮನಸರ ನಾಗರ ಕಟ್ಟೆ, ಗೊಲ್ಲರ ಕೇರಿಯಲ್ಲಿನ ನಾಗದೇವರ ಬನ ಸೇರಿದಂತೆ ವಿವಿಧೆಡೆ ಇರುವ ಕಲ್ಲಿನ ನಾಗರ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. 

ADVERTISEMENT

ನಾಗರಹಳ್ಳಿ: 

ಹಿಂದೂ-ಮುಸ್ಲಿಂ ಸೇರಿದಂತೆ ಸರ್ವಧರ್ಮದವರ ದೇವಾರಾಧನೆಯ ಸ್ಥಳವಾದ ನಾಗರಹಳ್ಳಿಯ ನಾಗೇಂದ್ರ ಸ್ವಾಮಿ ದೇವಾಲಯದಲ್ಲಿ ನಾಗರ ಪಂಚಮಿ ಅಂಗವಾಗಿ ಬೆಳಿಗ್ಗೆಯಿಂದಲೇ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆವರಣದ ಸುತ್ತಲೂ ಪ್ರತಿಷ್ಠಾಪಿಸಿದ ನಾಗರ ಮೂರ್ತಿಗಳಿಗೆ ಹಾಗೂ ಹಿಂಭಾಗದಲ್ಲಿರುವ ನಾಗಬನಕ್ಕೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. 20,000 ಕ್ಕೂ ಅಧಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ಸಂಜೆವರೆಗೂ ದೇವರ ದರ್ಶನ ಪಡೆದಿದ್ದು ವಿಶೇಷವಾಗಿತ್ತು. ಇಲ್ಲಿ ವರ್ಷಕ್ಕೆ ಎರಡು ಬಾರಿ ಜಾತ್ರೆ ನಡೆಯುತ್ತದೆ. 

1,300 ವರ್ಷಗಳ ಇತಿಹಾಸ ಇರುವ ಇಲ್ಲಿ ಸರ್ಪಸಂಸ್ಕಾರ ಕ್ರಿಯಾದಿಗಳು ನಡೆಯುವುದರಿಂದ ಈ ದೇವರಿಗೆ ನಂಬಿಕೆಯಿಂದ ಹರಕೆ ಹೊತ್ತ ಭಕ್ತರು ನಾಗರ ಪಂಚಮಿಯಂದು ಬೆಳ್ಳಿಯ ನಾಗಗಳನ್ನು ಹರಕೆ ಒಪ್ಪಿಸುವುದು ವಾಡಿಕೆ. 

ಹೊಸ ಉಡುಗೆ ತೊಟ್ಟ ಭಕ್ತರು, ದೇವರಿಗೆ ಹಾಲು, ಎಳ್ಳು ಉಂಡೆ ಸೇರಿದಂತೆ ಹಲವು ಭಕ್ಷ್ಯಗಳನ್ನು ನೈವೇದ್ಯ ಮಾಡಿ ಸಮರ್ಪಿಸುತ್ತಾರೆ.

ನಾಗರಹಳ್ಳಿ ನಾಗೇಂದ್ರ ಸ್ವಾಮಿಯ ಸನ್ನಿಧಾನದಲ್ಲಿ ಮಂಗಳವಾರ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.