ADVERTISEMENT

ಹೊಸನಗರ: ಕಗ್ಗೋಡಿ ಬ್ಯಾಣದಲ್ಲಿ ನವಶಿಲಾಯುಗದ ಕಲ್ಲು ಉಂಗುರ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 5:59 IST
Last Updated 4 ಆಗಸ್ಟ್ 2025, 5:59 IST
ಹೊಸನಗರ ತಾಲ್ಲೂಕಿನ ಬಿದನೂರು ಬಳಿಯ ಕಗ್ಗೋಡಿ ಬ್ಯಾಣದಲ್ಲಿ ನವಶಿಲಾಯುಗದ ಕಲ್ಲು ಉಂಗುರ ಪತ್ತೆಯಾಗಿರುವುದು
ಹೊಸನಗರ ತಾಲ್ಲೂಕಿನ ಬಿದನೂರು ಬಳಿಯ ಕಗ್ಗೋಡಿ ಬ್ಯಾಣದಲ್ಲಿ ನವಶಿಲಾಯುಗದ ಕಲ್ಲು ಉಂಗುರ ಪತ್ತೆಯಾಗಿರುವುದು   

ಹೊಸನಗರ: ತಾಲ್ಲೂಕಿನ ಬಿದನೂರು ಬಳಿಯ ಕಲಾವತಿ ಮತ್ತು ಇಳಾವತಿ ಹೊಳೆಗಳ ಸಂಗಮ ಕ್ಷೇತ್ರವಾದ ಕಗ್ಗೋಡಿ ಬ್ಯಾಣದಲ್ಲಿ ಇತಿಹಾಸ ಸಂಶೋಧಕ ಅಜಯಕುಮಾರ ಶರ್ಮಾ ಅವರು ನವಶಿಲಾಯುಗದ ಕಲ್ಲು ಉಂಗುರವನ್ನು ಪತ್ತೆ ಹಚ್ಚಿದ್ದಾರೆ. 

‘ಉಂಗುರಗಲ್ಲು ದೊರೆತ ಸ್ಥಳವು ಬಿದನೂರು ನಗರದಿಂದ 4 ಕಿ.ಮೀ. ದೂರದಲ್ಲಿದೆ. ಈ ಭಾಗದಲ್ಲಿ 6 ಸಾವಿರ ವರ್ಷಗಳಷ್ಟು ಹಳೆಯದಾದ ಈ ಕಲ್ಲಿನ ಉಂಗುರ ಪತ್ತೆಯಾಗಿದೆ. ಕಗ್ಗೋಡಿ ಬ್ಯಾಣ ಪ್ರದೇಶದಲ್ಲಿ ನವಶಿಲಾಯುಗದ ಜನವಸತಿ ಇತ್ತು ಎನ್ನಲು ಇದು ಜೀವಂತ ಸಾಕ್ಷಿಯಾಗಿದೆ’ ಎಂದು ಅವರು ತಿಳಿಸಿದ್ದಾರೆ. 

‘ಕಗ್ಗೋಡಿ ಊರಿನ ಪದದ ಅರ್ಥ ದೊಡ್ಡ ಗೋಡೆ ಎಂದಾಗಿದೆ. ಇದು ಕೆಳದಿ ಅರಸರ ರಾಜಧಾನಿ ಬಿದನೂರು ನಗರದ ಪ್ರಮುಖ ಸುರಕ್ಷತಾ ಕವಚ ಆಗಿತ್ತು. ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ತಯಾರಿಸಲಾದ ಈ ಕಲ್ಲಿನ ಉಂಗುರವನ್ನು ಬಲೆಗಳನ್ನು ನೀರಿನಲ್ಲಿ ಮುಳುಗಿಸಲು ತೂಕವಾಗಿ ಮತ್ತು ಮಣಿಗಳಿಗೆ ಹೊಳಪು ಕೊಡಲು ಆಧಾರವಾಗಿ ಬಳಸಲಾಗುತ್ತಿತ್ತು’ ಎಂದು ಅವರು ತಿಳಿಸಿದ್ದಾರೆ. 

ADVERTISEMENT

ತಾಲ್ಲೂಕಿನ ನಿಲ್ಸಕಲ್, ಬೈಸೆ, ಮುಂಬಾರು, ಮೇಲುಸುಂಕ ಮತ್ತು ದಿಬ್ಬಣಗಲ್ಲು ಪ್ರದೇಶಗಳು ಆದಿಮಾನವನ ನೆಲೆಗಳಾಗಿರುವ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆ ನಡೆದಿವೆ. 

ಪತ್ತೆ ಕಾರ್ಯದಲ್ಲಿ ಸ್ಥಳೀಯರಾದ ರಾಜಶ್ರೀ ರಾವ್, ಗೋಪಾಲ್ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.