ಕೋಣಂದೂರು ಸಮೀಪದ ಸಂತೆಹಕ್ಲಿನಲ್ಲಿ ಅಳವಡಿಸಿರುವ ಬಿಎಸ್‌ಎನ್‌ಎಲ್ ಟವರ್
ಕೋಣಂದೂರು: ಅಗ್ರಹಾರ ಹೋಬಳಿಯ ಸಂತೆ ಹಕ್ಲು, ಅಲಸೆ, ಬುಕ್ಕಿವರೆಯಲ್ಲಿ (ಮಸ್ಕಾನಿ) ಬಿಎಸ್ಎನ್ಎಲ್ ಟವರ್ ಅಳವಡಿಸಿ ವರ್ಷ ಕಳೆದರೂ ಕಾರ್ಯಾರಂಭ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ಸೌಲಭ್ಯ ದೊರೆಯದಂತಾಗಿದೆ.
ಸಂತೆಹಕ್ಲು, ಅಲಸೆ, ಬುಕ್ಕಿವರೆಯಲ್ಲಿ ಟವರ್‌ನ ಅಳವಡಿಕೆಯ ಎಲ್ಲ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಸೋಲಾರ್ ವ್ಯವಸ್ಥೆ ಅಳವಡಿಕೆಯೂ ಮುಗಿದಿದೆ. ಆದರೂ ಸೇವೆ ಮಾತ್ರ ಆರಂಭವಾಗಿಲ್ಲ. ಬಹುತೇಕ ಗ್ರಾಮಾಂತರ ಭಾಗದವರು ಬಿಎಸ್ಎನ್ಎಲ್ ನೆಟ್‌ವರ್ಕ್ ನಂಬಿಕೊಂಡಿದ್ದಾರೆ. ನೆಟ್‌ವರ್ಕ್ ಇದ್ದರೂ ಮಾತನಾಡಲು ಆಗುತ್ತಿಲ್ಲ. ಬ್ಯಾಂಕ್, ಸರ್ಕಾರಿ– ಖಾಸಗಿ ಕಚೇರಿ ಕೆಲಸಗಳಲ್ಲಿ ಕೆಲಸ ಆಗುತ್ತಿಲ್ಲ. ಅಲ್ಲೆಲ್ಲ ಸರ್ವರ್ ಡೌನ್ ಎಂಬ ಉತ್ತರ ಸಾಮಾನ್ಯವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಗ್ರಾಮ ಪಂಚಾಯಿತಿ, ಬ್ಯಾಂಕ್, ರೈತ ಸಂಪರ್ಕ ಕೇಂದ್ರಗಳು, ಗ್ರಾಮ ಒನ್ ಕೇಂದ್ರಗಳಲ್ಲಿ ನೆಟ್‌ವರ್ಕ್ ಇಲ್ಲದಿದ್ದರೆ ಕೆಲಸ ಕಾರ್ಯಗಳೇ ನಡೆಯುವುದಿಲ್ಲ. ಇದರಿಂದ ರೈತರಿಗೆ, ಬ್ಯಾಂಕ್ ಗ್ರಾಹಕರಿಗೆ ತೀವ್ರ ಸಮಸ್ಯೆ ಎದುರಾಗಿದೆ.
ವಾರದಿಂದ ಇಲ್ಲ ನೆಟ್‌ವರ್ಕ್:
ಕಳೆದ ನಾಲ್ಕೈದು ದಿನಗಳಿಂದ ಕೋಣಂದೂರು, ದೇಮ್ಲಾಪುರ ಸುತ್ತಮುತ್ತ ಬಿಎಸ್ಎನ್ಎಲ್ ನೆಟ್‌ವರ್ಕ್ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಇದರಿಂದಾಗಿ ಸಂಸ್ಥೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಪದೇಪದೇ ಸ್ಥಗಿತಗೊಳ್ಳುತ್ತಿರುವ ನೆಟ್‌ವರ್ಕ್ ಸಮಸ್ಯಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಗ್ರಾಹಕರಿಗೆ ಸರಿಯಾದ ಸೇವೆ ದೊರಕಬೇಕು ಎಂದು ಕೋಣಂದೂರಿನ ದೇವರಾಜ ಶೆಟ್ಟಿ ಒತ್ತಾಯಿಸುತ್ತಾರೆ.
ಹೊಸದಾಗಿ ನಿರ್ಮಾಣವಾದ ಟವರ್‌ಗಳ ಸೇವೆ ಆದಷ್ಟು ಬೇಗ ದೊರೆಯಲು ಅಧಿಕಾರಿಗಳು ವ್ಯವಸ್ಥೆ ಮಾಡಬೇಕು. ಆ ಮೂಲಕ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂಬುದು ಈ ಭಾಗದ ಬಹುತೇಕ ಜನರ ನಿರೀಕ್ಷೆ.
ಶೀಘ್ರ ಟವರ್ ಕಾರ್ಯಾರಂಭ: ಬಿಎಸ್ಸೆನ್ನೆಲ್
‘ಟವರ್ ಅಳವಡಿಕೆ ಕೆಲಸ ಪೂರ್ಣಗೊಂಡಿದೆ. ಪ್ರಯೋಗಾರ್ಥವಾಗಿ ಸಂಪರ್ಕ ಪರೀಕ್ಷಿಸಲಾಗುತ್ತಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಸೇವೆ ನೀಡುವಲ್ಲಿ ವಿಳಂಬವಾಗುತ್ತಿದೆ. 8ರಿಂದ 10 ದಿನಗಳ ಒಳಗಾಗಿ ಟವರ್‌ಗಳು ಸೇವೆ ಒದಗಿಸಲಿವೆ. ಜಲಜೀವನ್ ಮಿಷನ್ ಕಾಮಗಾರಿ ವೇಳೆ ಕೇಬಲ್ ತುಂಡಾಗಿರುವುದರಿಂದ ಕೆಲ ಭಾಗಗಳಲ್ಲಿ ಸಂಪರ್ಕಕ್ಕೆ ಅಡಚಣೆಯಾಗಿದೆ’ ಎಂದು ತೀರ್ಥಹಳ್ಳಿ ಟೆಲಿಕಾಂ ಅಧಿಕಾರಿ ಎಸ್.ಲೋಹಿತ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.