ADVERTISEMENT

‘ಹೊಸ ಶಿಕ್ಷಣ ನೀತಿ: ಪದವಿ ಅವಧಿ ಬದಲಾಗಿಲ್ಲ’

ಅನುದಾನ ರಹಿತ ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ವೇದಿಕೆ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 6:31 IST
Last Updated 7 ಆಗಸ್ಟ್ 2022, 6:31 IST

ಶಿವಮೊಗ್ಗ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಪದವಿ ತರಗತಿಗಳು ಮೂರು ವರ್ಷದ ಕೋರ್ಸ್‌ಗಳಾಗಿವೆಯೇ ಹೊರತು, ನಾಲ್ಕು ವರ್ಷದ ಕೋರ್ಸ್ ಅಲ್ಲ ಎಂದು ಅನುದಾನ ರಹಿತ ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ವೇದಿಕೆ ಸ್ಪಷ್ಟಪಡಿಸಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊಯ್ಸಳ ಕಾಲೇಜು ಪ್ರಾಂಶುಪಾಲ ವಿಲಿಯಂ ಡಿಸೋಜ, ‘ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿ.ಎಸ್.ಡಬ್ಲ್ಯು., ಬಿ.ಎಫ್.ಟಿ ಪದವಿ ಮೂರು ವರ್ಷಗಳ ಅವಧಿಗೆ ನಡೆಯುತ್ತವೆ. ಕೆಲವರು ಇನ್ನು ಮುಂದೆ ಪದವಿ ನಾಲ್ಕು ವರ್ಷ ಎಂದು ತಪ್ಪು ಕಲ್ಪನೆ ಮಾಡಿಕೊಂಡಿದ್ದಾರೆ’ ಎಂದರು.

ಮೂರು ವರ್ಷದ ಪದವಿ ಮುಗಿಸಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದಲೇ ಸಂಬಂಧಿಸಿದ ಪದವಿ ಪ್ರಮಾಣ
ಪತ್ರ ಹಿಂದಿನಂತೆಯೇ ಪಡೆಯುತ್ತಾರೆ. ಪದವಿ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಅಥವಾ ಉದ್ಯೋಗ ಪಡೆಯಲು ಮುಕ್ತ ಅವಕಾಶವಿರುತ್ತದೆ ಎಂದರು.

ADVERTISEMENT

ಹೊಸ ಶಿಕ್ಷಣ ನೀತಿಯಡಿ ಬಿಎಸ್ಸಿ ಅಥವಾ ಬಿಎ ಪದವಿ ಆಯ್ಕೆ ಮಾಡಿಕೊಂಡಾಗ ತನ್ನ ಇಚ್ಛೆಯ ಯಾವುದಾದರೂ ಎರಡು ವಿಷಯ ಹಾಗೂ ಮುಕ್ತ ಆಯ್ಕೆಯ ಒಂದು ವಿಷಯ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಇಚ್ಛೆಯ ವಿಷಯದಲ್ಲಿ ಆಳ ಅಧ್ಯಯನಕ್ಕೆ ಅವಕಾಶ ಸಿಗಲಿದೆ ಎಂದು ವಿವರಿಸಿದರು.
‘ಉನ್ನತ ಶಿಕ್ಷಣ ಇಲಾಖೆ ಪದವಿ ತರಗತಿಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸುವಂತೆ ಆದೇಶ ನೀಡಿದೆ. ಎಲ್ಲಾ ಖಾಸಗಿ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ ದಾಖಲಾತಿ ಬಗ್ಗೆ ಮಾರ್ಗದರ್ಶನ ನೀಡಲಾಗುವುದು’ ಎಂದುಡಾ. ಸಂಧ್ಯಾ ಕಾವೇರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರೊ. ಶಂಕರನಾರಾಯಣ, ಡಾ. ಅರವಿಂದ್, ಡಾ. ರಾಜೇಂದ್ರ ಚೆನ್ನಿ, ಗಿರೀಶ್, ಪ್ರೊ. ದಿವಾಕರ್, ಪ್ರೊ. ರಾಮಚಂದ್ರ ಬಾಳಿಗ ಇದ್ದರು.

ಗೊಂದಲ ನಿವಾರಣೆ; ವಿಚಾರಸಂಕಿರಣ ಶೀಘ್ರ:

ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಗೊಂದಲಗಳ ಪರಿಹರಿಸಲು ಉನ್ನತ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವೇದಿಕೆ ಸದ್ಯದಲ್ಲಿಯೇ ವಿದ್ಯಾರ್ಥಿಗಳು, ಪೋಷಕರಿಗೆ ವಿಚಾರಸಂಕಿರಣ ಆಯೋಜಿಸಲಿದೆ ಎಂದು ವಿಲಿಯಂ ಡಿಸೋಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.