ADVERTISEMENT

ರೈತರ ಬದುಕು ಹಸನಾಗಿಸುವ ಭರವಸೆ; ನೂತನ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ

ಇರುವಕ್ಕಿ: 24ಕ್ಕೆ ನೂತನ ಕೃಷಿ ವಿ.ವಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 19:37 IST
Last Updated 21 ಜುಲೈ 2021, 19:37 IST
ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣದವಾದ ಆಡಳಿತ ಭವನ
ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣದವಾದ ಆಡಳಿತ ಭವನ   

ಆನಂದಪುರ: ಮಲೆನಾಡು ರೈತರು ಬಹುದಿನಗಳಿಂದ ಕಾಯುತ್ತಿರುವ, ಇರುವಕ್ಕಿಯಲ್ಲಿ ಸ್ಥಾಪನೆಗೊಂಡ ನೂತನ ಕೃಷಿ ವಿಶ್ವವಿದ್ಯಾಲಯ ಜುಲೈ 24ರಂದು ಲೋಕಾರ್ಪಣೆಗೊಳ್ಳಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ.

777.7 ಎಕರೆ ಪ್ರದೇಶದಲ್ಲಿ ₹ 155 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ವಿಶ್ವವಿದ್ಯಾಲಯ ಕರಾವಳಿ ಹಾಗೂ ಮಲೆನಾಡು ಭಾಗದ ರೈತರಿಗೆ ಹೆಚ್ಚಿನ ಆದ್ಯತೆ ಸಿಗುವ ಭರವಸೆ ಮೂಡಿಸಿದೆ.

ADVERTISEMENT

ಈಗ ಇರುವ ವಿಶ್ವವಿದ್ಯಾಲಯಗಳು ಕೇವಲ ಒಂದೆರೆಡು ವಿಭಾಗಕ್ಕೆ ಸೀಮಿತವಾಗಿವೆ. ಇರುವಕ್ಕಿ ವಿಶ್ವವಿದ್ಯಾಲಯದಲ್ಲಿ ಕೃಷಿ, ಅರಣ್ಯ, ತೋಟಗಾರಿಕೆ ಘಟಕಗಳು ಇರುವುದರಿಂದ ರೈತರು ಯಾವುದೇ ಬೆಳೆ ಬೆಳೆದರೂ ನಿಖರವಾದ ಪೂರ್ಣ ಮಾಹಿತಿ ಹಾಗೂ ತರಬೇತಿ ಪಡೆಯಬಹುದು.

ಏಳು ಜಿಲ್ಲೆಗಳನ್ನು ಗುರಿಯಾಗಿಸಿಕೊಂಡು ಈ ವಿಶ್ವವಿದ್ಯಾಲಯ ಪ್ರಾರಂಭಗೊಳ್ಳುತ್ತಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಕರಾವಳಿಯ ಮಂಗಳೂರು, ದಕ್ಷಿಣ ಕನ್ನಡ ಹಾಗೂ ಬಯಲುಸೀಮೆ ಪ್ರದೇಶಗಳಾದ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಬೆಳೆ ಹಾಗೂ ಹವಾಮಾನವನ್ನು ಅಧ್ಯಯನ ಮಾಡಿ ನಿಖರ ಮಾಹಿತಿಯನ್ನು ತಿಳಿದು ಪ್ರಚುರಪಡಿಸುವ ಕಾರ್ಯವನ್ನು ವಿಶ್ವವಿದ್ಯಾಲಯ ನಿರ್ವಹಿಸಲಿದೆ.

ರೈತರಿಗೆ ಗುಣಮಟ್ಟದ ಸಸಿಗಳ ವಿತರಣೆ: ರೈತರಿಗೆ ಈಗಾಗಲೇ ಉತ್ತಮ ಗುಣಮಟ್ಟದ ಹಾಗೂ ಸಂಸ್ಕರಿಸಿದ ಅಡಿಕೆ, ತೆಂಗು, ಗೇರು, ಕಾಳುಮೆಣಸು, ಆಲಂಕಾರಕ ಸಸಿಗಳು, ಔಷಧೀಯ ಸಸ್ಯಗಳು ಹಾಗೂ ಏಲಕ್ಕಿ ಸಸಿಗಳನ್ನು ಅತ್ಯಂತ ಕಡಿಮೆ ದರದಲ್ಲಿ 25 ಸಾವಿರಕ್ಕೂ ಅಧಿಕ ಗಿಡಗಳನ್ನು ವಿತರಣೆ ಮಾಡಲಾಗಿದೆ.

ವಿಶೇಷ ಜಾತಿ ಮರಗಳ ಸಂರಕ್ಷಣೆ, ಸಂಶೋಧನೆ: ಭಾರತೀಯ ಮರ ವಿಜ್ಞಾನ ಸಂಶೋಧನಾ ಸಂಸ್ಥೆಯಿಂದ 3 ಎಕರೆ ಪ್ರದೇಶದಲ್ಲಿ 14 ಬಗೆಯ ಅಗರ್‌ವುಡ್ ಪ್ರಬೇಧಗಳನ್ನು ಅಸ್ಸಾಂ, ತ್ರಿಪುರ, ಅರುಣಾಚಲ ಪ್ರದೇಶಗಳಿಂದ ತಂದು ಸಂರಕ್ಷಣೆ ಹಾಗೂ ಸಂಶೋಧನೆ ಮಾಡಲಾಗುತ್ತಿದೆ. ಜತೆಗೆ 2 ಎಕರೆಯಲ್ಲಿ 9 ವಿವಿಧ ಬಿದಿರು ಪ್ರಬೇಧಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೊಡಗಿನ ಕಿತ್ತಳೆಯನ್ನು ಈಗಾಗಲೇ ನೆಡಲಾಗಿದ್ದು, ಉತ್ತಮ ಫಸಲನ್ನು ನಿರೀಕ್ಷೆ ಮಾಡಲಾಗುತ್ತಿದೆ.

ಕಿತ್ತಳೆ, ಮ್ಯಾಂಗೋಸ್ಟನ್, ಬಟರ್‌ಫ್ರೂಟ್, ಡ್ರ್ಯಾಗನ್ ಫ್ರೂಟ್, ರಾಮ್ ಬೊಟಾನ್ ಇನ್ನಿತರ ಮರಗಳನ್ನು ಇಲ್ಲಿ ಬೆಳೆಸಲು ಸಂಶೋಧನೆ ಕೈಗೊಳ್ಳಲಾಗುತ್ತಿದೆ. ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಈ ಭಾಗದ ಬೆಳೆಗಳ ಕೀಟ ಹಾಗೂ ರೋಗಗಳ ಸಂಶೋಧನೆಗೆ ಘಟಕ ಪ್ರಾರಂಭ ಮಾಡುತ್ತಿರುವುದು ಸಂತಸದ ವಿಷಯವಾಗಿದೆ.

ಅವನತಿ ಹೊಂದುತ್ತಿರುವ ಮರಗಳ ಸಂರಕ್ಷಣೆ: ಮಲೆನಾಡಿನ ಹಾಗೂ ಪಶ್ಚಿಮ ಘಟ್ಟಗಳ ಅವನತಿ ಹೊಂದುತ್ತಿರುವ 20 ವಿವಿಧ ತಳಿಯ ಅಪರೂಪದ ಗಿಡಗಳ ಸಂರಕ್ಷಣೆಗೆ ಒಂದು ಎಕರೆ ಮೀಸಲಿಡಲಾಗಿದೆ. ಹೆಬ್ಬೇವಿನ ವಿವಿಧ 10 ಪ್ರಬೇಧಗಳನ್ನು ಕೊಯಮತ್ತೂರಿನಿಂದ ತಂದು ಸಂರಕ್ಷಣೆ ಮಾಡಲಾಗುತ್ತಿದೆ. ಅಲ್ಲದೇ ಗೋಡಂಬಿ ಹಾಗೂ ನಿಂಬೆ ಗಿಡಗಳನ್ನು ಸಂಶೋಧನೆ ಮಾಡಿ ನೂರಾರು ಗಿಡಗಳನ್ನು ನಾಟಿ ಮಾಡಲಾಗಿದೆ.

ನೆರೆಹಾವಳಿ ಸಂದರ್ಭದಲ್ಲೂ ತೊಂದರೆಯಾಗದ ಹಾಗೆ ಕುಚಲಕ್ಕಿ (ರೆಡ್ ರೈಸ್) ಭತ್ತದ ಬೆಳೆಯ ಸಂಶೋಧನೆಗೆ ಒತ್ತು ನೀಡಲಾಗಿದೆ. ನಶಿಸುವ ಹಂತದಲ್ಲಿರುವ ಅಪ್ಪೆಮಿಡಿ ಸಂರಕ್ಷಣೆ ಹಾಗೂ ಸಂಶೋಧನೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಈಗಾಗಲೇ 117 ಜಾತಿಯ ಅಪ್ಪೆಮಿಡಿ ಸಸಿಗಳನ್ನು ಸಂರಕ್ಷಣೆ ಮಾಡಲಾಗಿದೆ.

***

ಹಲವು ಕಾಮಾಗಾರಿ ಬಾಕಿ ನಡುವೆ ವಿಶ್ವವಿದ್ಯಾಲಯ ಉದ್ಘಾಟನೆ

‘ಮೊದಲ ಹಂತವಾಗಿ ಆಡಳಿತ ಭವನ, 4 ಶೈಕ್ಷಣಿಕ ಘಟಕಗಳು, 2 ವಿದ್ಯಾರ್ಥಿ ನಿಲಯ ಹಾಗೂ ಒಂದು ಗ್ರಂಥಾಲಯದ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ತರಗತಿಗಳು ಆರಂಭವಾಗಬೇಕಾದರೆ ಪೀಠೋಪಕರಣ ವ್ಯವಸ್ಥೆ, ಕ್ಯಾಂಟಿನ್, ಸಭಾಭವನ, ಆಟದ ಮೈದಾನ, ಕ್ಲಿನಿಕ್, ಹೊರರಾಜ್ಯ ಹಾಗೂ ಹೊರದೇಶಗಳಿಂದ ಬರುವ ವಿಜ್ಞಾನಿಗಳಿಗೆ ವಸತಿ ಗೃಹ ವ್ಯವಸ್ಥೆ ಆಗಬೇಕಾಗಿದೆ. 777 ಎಕರೆಯ ಸುತ್ತ ಪೆನ್ಸಿಂಗ್ ವ್ಯವಸ್ಥೆ ಆಗಬೇಕಾಗಿದೆ. ಇವುಗಳು ಪೂರ್ಣವಾಗಬೇಕಾದರೆ ಇನ್ನೂ ₹ 100 ಕೋಟಿ ಹಣ ಬೇಕಾಗುತ್ತದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯ್ಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.