ADVERTISEMENT

ಬಿಜೆಪಿಗೆ ಸ್ಪಷ್ಟ ಬಹುಮತ ಖಚಿತ: ಬಿ.ಎಸ್. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 6:48 IST
Last Updated 20 ಮಾರ್ಚ್ 2023, 6:48 IST
ಸೊರಬದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೂಡಿ ಏತ ನೀರಾವರಿ ಯೋಜನೆ, ಎಸ್. ಬಂಗಾರಪ್ಪ ಮೆಮೊರಿಯಲ್ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು‌ ವಸತಿಶಾಲೆ ಕಟ್ಟಡಕ್ಕೆ ಭೂಮಿಪೂಜೆ ಕಾರ್ಯಕ್ರಮವನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಸೊರಬದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೂಡಿ ಏತ ನೀರಾವರಿ ಯೋಜನೆ, ಎಸ್. ಬಂಗಾರಪ್ಪ ಮೆಮೊರಿಯಲ್ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು‌ ವಸತಿಶಾಲೆ ಕಟ್ಟಡಕ್ಕೆ ಭೂಮಿಪೂಜೆ ಕಾರ್ಯಕ್ರಮವನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.   

ಸೊರಬ: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಸ್ಪಷ್ಟ ಬಹುಮತ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ಡಬಲ್ ಎಂಜಿನ್ ಸರ್ಕಾರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೂಡಿ ಏತ ನೀರಾವರಿ ಯೋಜನೆ, ಎಸ್. ಬಂಗಾರಪ್ಪ ಮೆಮೋರಿಯಲ್ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು‌ ವಸತಿಶಾಲೆ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ದೇಶದಲ್ಲಿ ಬಿಜೆಪಿ ಪರವಾದ ಅಭಿಪ್ರಾಯ ಸಾಮಾನ್ಯ ಜನರಲ್ಲಿ ವ್ಯಕ್ತವಾಗುತ್ತಿದ್ದು, ನರೇಂದ್ರ ಮೋದಿ ಅವರ ಜನಪರ ಕೆಲಸಗಳು ಮತದಾರರನ್ನು ಜಾಗೃತಿ ಮೂಡಿಸಿದೆ. ಈ ಬಾರಿ 140ಕ್ಕೂ ಅಧಿಕ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.

ADVERTISEMENT

ಕ್ಷೇತ್ರದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಅಭಿವೃದ್ಧಿ ಕೆಲಸಗಳು ಪ್ರತಿಯೊಬ್ಬರಿಗೂ ತಿಳಿದಿದೆ. ಅವರ ಅಭಿವೃದ್ಧಿ ತುಡಿತಕ್ಕೆ ಜನರು ಬೆಂಬಲ ನೀಡಬೇಕು. ಭದ್ರಾವತಿ ಸೇರಿ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಗತ್ಯ ಸಿದ್ಧತೆ ನಡೆದಿದೆ ಎಂದರು.

ತಾಲ್ಲೂಕಿನ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪ ಅವರ ಕೃಪಕಾಟಕ್ಷವಿದ್ದು, ನೀರಾವರಿ ಸೇರಿ ವಿವಿಧ ಅಭಿವೃದ್ಧಿಗೆ ಅನುದಾನ ಕೇಳಿದಾಗ ಹಿಂದು ಮುಂದು ನೋಡದೆ ಯೋಜನೆಗೆ ಮಂಜೂರಾತಿ ನೀಡಿದ್ದಾರೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಸ್ಮರಿಸಿದರು.

‘ಬಗರ್‌ಹುಕುಂ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಕಾನೂನಾತ್ಮಕವಾಗಿ ಹದ್ದುಬಸ್ತು ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ವಹಿಸಲಾಗಿದೆ. ಜಮೀನು ನಮ್ಮ ಕೈತಪ್ಪಲಿದೆ ಎನ್ನುವ ಆತಂಕದಲ್ಲಿ ರೈತರು ಇರಬಾರದು ಎಂದು ರಾಜ್ಯ ಸರ್ಕಾರ ಕಾನೂನು ರೂಪಿಸಲಿದೆ’ ಎಂದರು.

ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಡಿವಾಳ ಮಾಚಿದೇವ ನಿಗಮದ ರಾಜ್ಯಾಧ್ಯಕ್ಷ ರಾಜು ತಲ್ಲೂರು, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ್, ತಾಲ್ಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ವಿಜಯ ಸಂಕಲ್ಪ ಯಾತ್ರೆ ಸಂಚಾಲಕರಾದ ರಾಜೇಂದ್ರ, ದತ್ತಾತ್ರಿ, ಶಿವಕುಮಾರ್ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಎಂ.ಡಿ. ಉಮೇಶ್, ಮಧುರಾಯ್ ಶೇಟ್ ಇದ್ದರು.

ಉತ್ಸಾಹ ಕಳೆದುಕೊಂಡಿದ್ದ ಕಾರ್ಯಕರ್ತರು

ಸರ್ಕಾರಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಜಯ ಸಂಕಲ್ಪ ಯಾತ್ರೆ ಆಯೋಜಿಸಿದ್ದರಿಂದ ಕಾರ್ಯಕರ್ತರ ಮನಸ್ಸಿನಲ್ಲಿ ಉತ್ಸಾಹ ಕಂಡು ಬರಲಿಲ್ಲ.

ನಿಗದಿತ ಸಮಯಕ್ಕಿಂತ 2 ತಾಸು ತಡವಾಗಿ ಬಂದ ಯಡಿಯೂರಪ್ಪ ಅವರು ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋನಲ್ಲಿ ಭಾಗವಹಿಸಿ ವೇದಿಕೆಯಲ್ಲಿ ಎರಡು ನಿಮಿಷ ಮಾತನಾಡಿ ಪಕ್ಷದ ಕಾರ್ಯಕ್ರಮ ನಿಮಿತ್ತ ಚನ್ನಗಿರಿಗೆ ತೆರಳಿದರು.

ಕೇವಲ 15 ನಿಮಿಷದಲ್ಲಿ ವೇದಿಕೆ ಕಾರ್ಯಕ್ರಮ ಮುಕ್ತಾಯವಾಗಿದ್ದರಿಂದ ದೂರದ ಗ್ರಾಮಗಳಿಂದ ಬೆಳಿಗ್ಗೆಯೇ ಬಂದಿದ್ದ ಕಾರ್ಯಕರ್ತರ ಉತ್ಸಾಹ ಕುಂದಿತು. ಕಾರ್ಯಕರ್ತರು ಅಷ್ಟೇ ಬೇಗ ತಮ್ಮ ಗ್ರಾಮಗಳಿಗೆ ತೆರಳಿದರು.

ಶಾಸಕ ಕುಮಾರ್ ಬಂಗಾರಪ್ಪ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಬಂಡಾಯ ಎದ್ದಿರುವ ಮೂಲ ಬಿಜೆಪಿಗರು ನಮೋ ವೇದಿಕೆ ಸಂಘಟನೆ ಹುಟ್ಟು ಹಾಕಿದ್ದು, ಆ ಮೂಲಕ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡದಂತೆ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.

ಆದರೆ, ಬಿ.ಎಸ್. ಯಡಿಯೂರಪ್ಪ ಅವರು, ಶಾಸಕ ಕುಮಾರ್ ಬಂಗಾರಪ್ಪ ಅಭಿವೃದ್ಧಿ ಹೊಳೆ ಹರಿಸಿದ್ದು, ಅವರನ್ನು ಬೆಂಬಲಿಸಿ ಎನ್ನುವ ಮೂಲಕ ಕುಮಾರ್ ಬಂಗಾರಪ್ಪ ಅವರಿಗೇ ಬಿಜೆಪಿ ಟಿಕೆಟ್ ಖಚಿತ ಎಂಬ ಸಂದೇಶ ರವಾನಿಸಿದ್ದಾರೆ.

ನಮೋ‌ ವೇದಿಕೆ ಸ್ಥಾಪನೆಗೆ ಕಾರಣರಾದ ಸಹಕಾರಿ ಧುರೀಣ ಹಾಗೂ ಬಿಜೆಪಿ ಹಿರಿಯ ಮುಖಂಡ ಎಚ್.ಎಸ್. ಮಂಜಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.