ಶಿವಮೊಗ್ಗ: ಸುರಿಯುವ ಮಳೆಯಲ್ಲಿ, ಕೊರೆವ ಚಳಿಯಲ್ಲಿ ಮನೆ ಮನೆಗೆ ಪತ್ರಿಕೆ ಹಂಚುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದುಎಂದು ಡಾ.ಧನಂಜಯ ಸರ್ಜಿ ಹೇಳಿದರು.
ನಗರದಲ್ಲಿ ಭಾನುವಾರದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ದಿನಪತ್ರಿಕೆ ವಿತರಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪತ್ರಿಕಾ ವಿತರಕರಾಗಿದ್ದ ಅಬ್ದುಲ್ ಕಲಾಂ ಎಂಜಿನಿಯರ್ ಆಗಿ, ವಿಜ್ಞಾನಿಯಾಗಿ, ದೇಶದ ರಾಷ್ಟ್ರಪತಿ ಸ್ಥಾನ ಅಲಂಕರಿಸಿದರು. ಜೀವನದಲ್ಲಿ ಡ್ರೀಮ್, ಡೇಟ್, ಡಿಕ್ಲೇರ್ ಮತ್ತು ಡೆಡಿಕೇಶನ್ ಎಂಬ ನಾಲ್ಕು ‘ಡಿ’ ಸೂತ್ರ ಅಳವಡಿಸಿಕೊಂಡಾಗ ಸಾಧನೆಗೆ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ ಎಂದು ಸಲಹೆ ನೀಡಿದರು.
‘ಜೀವನದಲ್ಲಿ ದೊಡ್ಡ ಕನಸು ಕಾಣಬೇಕು. ಕನಸು ನನಸು ಮಾಡಿಕೊಳ್ಳುವ ಛಲದಿಂದ ತಕ್ಕ ಸಿದ್ಧತೆ ಮತ್ತು ವಿಚಾರಧಾರೆಯಿಂದ ಮುನ್ನಡೆದರೆ ಅಸಾಧ್ಯವೂ ಸಾಧ್ಯ’ ಎಂದು ಹೇಳಿದರು.
‘ಪತ್ರಿಕಾ ವಿತರಕರಿಗೆ ಆರೋಗ್ಯ ಅತಿಮುಖ್ಯ. ನಿಮ್ಮ ಸಂಘಟನೆಯಲ್ಲಿ ಒಗ್ಗಟ್ಟಿದ್ದರೆ, ನಿಮ್ಮ ಸವಲತ್ತು ನೀವೇ ಪಡೆದುಕೊಳ್ಳಬಹುದು. ಸಂಘವನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಇಎಸ್‍ಐ ಸೌಲಭ್ಯ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.
‘ದಿನಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಮೂಲ ಉದ್ದೇಶ ಕ್ಷೇಮ ಮತ್ತು ಅಭಿವೃದ್ಧಿ. ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟ ಸಾಗರದ ಪತ್ರಿಕಾ ವಿತರಕನಿಗೆ ಸಂಘವೇ ₹ 2 ಲಕ್ಷ ಪರಿಹಾರ ನೀಡಿದೆ. ಈ
ರೀತಿಯ ಸಹಾಯಗಳು ಸಂಘ ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯವಾಗುತ್ತದೆ’ ಎಂದು ಶಾಸಕ ಎಸ್.ರುದ್ರೇಗೌಡ ತಿಳಿಸಿದರು.
ಪತ್ರಕರ್ತರಾದ ಗೋಪಾಲ್ ಎಸ್. ಯಡಗೆರೆ, ಸೂರ್ಯನಾರಾಯಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ದಿನಪತ್ರಿಕೆ ವಿತರಿಸುತ್ತಿರುವ ಸಂಜಯ್, ಪ್ರಕಾಶ್, ಸತ್ಯನಾರಾಯಣ್, ಗಿಡ್ಡೇಶ್, ಕೈಷ್ಣಮೂರ್ತಿ, ರಮೇಶ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸತ್ಯನಾರಾಯಣ ವಹಿಸಿಕೊಂಡಿದ್ದರು. ಪ್ರಸರಣ ವಿಭಾಗದ ಪ್ರಮುಖರಾದ ಕೆ.ಎನ್.ಸತೀಶ್, ಸಂಘದ ಗೌರವಾಧ್ಯಕ್ಷ ಗಣೇಶ್ ಭಟ್, ಯೋಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.