ADVERTISEMENT

ಯುವ ಸಮೂಹದಲ್ಲಿ ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿ: ವ್ಯಾಸ ದೇಶಪಾಂಡೆ

ಧಾರವಾಡದಲ್ಲಿ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 5:01 IST
Last Updated 17 ಡಿಸೆಂಬರ್ 2025, 5:01 IST
ಧಾರವಾಡದ ಪಾಟೀಲ್‌ ಪುಟ್ಟಪ್ಪ ಸಭಾಂಗಣದಲ್ಲಿ ಭಾನುವಾರ ನಡೆದ ಸಾಕಾರದ 12ನೇ  ವಾರ್ಷಿಕೋತ್ಸವದಲ್ಲಿ ಪತ್ರಕರ್ತರಾದ ರಾಜೀವ ಕಿದಿಯೂರು ಮತ್ತು ಎಸ್‌.ಗಿರಿಜಾ ಶಂಕರ ಅವರಿಗೆ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನ ಮಾಡಲಾಯಿತು
ಧಾರವಾಡದ ಪಾಟೀಲ್‌ ಪುಟ್ಟಪ್ಪ ಸಭಾಂಗಣದಲ್ಲಿ ಭಾನುವಾರ ನಡೆದ ಸಾಕಾರದ 12ನೇ  ವಾರ್ಷಿಕೋತ್ಸವದಲ್ಲಿ ಪತ್ರಕರ್ತರಾದ ರಾಜೀವ ಕಿದಿಯೂರು ಮತ್ತು ಎಸ್‌.ಗಿರಿಜಾ ಶಂಕರ ಅವರಿಗೆ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಶಿವಮೊಗ್ಗ: ‘ಮಾಧ್ಯಮ ಕ್ಷೇತ್ರವು ಇಂದು ಕವಲುದಾರಿಯಲ್ಲಿರುವ ಜೊತೆಗೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂಕ್ರಮಣ ಕಾಲಘಟ್ಟದಲ್ಲಿ ಯುವ ಸಮೂಹದಲ್ಲಿ ಪತ್ರಿಕೆಗಳನ್ನು ಓದುವ ಸಂಸ್ಕೃತಿ ಬೆಳೆಸಬೇಕಿದೆ’ ಎಂದು ನಿವೃತ್ತ ವಿಶೇಷ ಜಿಲ್ಲಾಧಿಕಾರಿ ವ್ಯಾಸ ದೇಶಪಾಂಡೆ ಹೇಳಿದರು.  

ಧಾರವಾಡದ ಸಾಕಾರ (ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನ) ಮತ್ತು ಶಿವಮೊಗ್ಗ ಮಿಂಚು ಶ್ರೀನಿವಾಸ ಕುಟುಂಬ ವರ್ಗದ ಆಶ್ರಯದಲ್ಲಿ ಧಾರವಾಡದ ಪಾಟೀಲ್‌ ಪುಟ್ಟಪ್ಪ ಸಭಾಂಗಣದಲ್ಲಿ ಭಾನುವಾರ ನಡೆದ ಸಾಕಾರದ 12ನೇ ವಾರ್ಷಿಕೋತ್ಸವ ಹಾಗೂ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.  

‘ಬದಲಾದ ಹಾಗೂ ಬದಲಾಗುತ್ತಿರುವ ಸಂದರ್ಭದಲ್ಲಿ ಪತ್ರಿಕಾ ಭಾಷೆ, ಸಾಹಿತ್ಯ ಹಾಗೂ ರಂಗಭೂಮಿಯ ಭಾಷೆ ಕೂಡಾ ಬದಲಾಗುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಚಿಂತನೆಗಳು ನಡೆಯಬೇಕು. ಈ ಬದಲಾವಣೆಗಳ ಒಪ್ಪಿಕೊಳ್ಳುತ್ತಲೇ, ಈ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಬೇಕಿದೆ’ ಎಂದರು. 

ADVERTISEMENT

ಮಿಂಚು ಶ್ರೀನಿವಾಸ ಪ್ರಶಸ್ತಿಯನ್ನು ಪತ್ರಕರ್ತರಾದ ರಾಜೀವ ಕಿದಿಯೂರು, ಎಸ್. ಗಿರಿಜಾ ಶಂಕರ್‌ ಅವರಿಗೆ ಪ್ರದಾನ ಮಾಡಲಾಯಿತು. 

ವಿದುಷಿ ಸುಮಂಗಲಾ ರತ್ನಾಕರ ಅವರಿಗೆ ಸಿ.ಆರ್. ಭಟ್ ಹೆಸರಿನಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ, ಜೆ. ದಾದಾಗೌಡ ಪಾಟೀಲ್‌ ಅವರಿಗೆ ದತ್ತಾತ್ರೇಯ ಕುಲಕರ್ಣಿ ಹೆಸರಿನಲ್ಲಿ ಶಿಕ್ಷಣ ಸಿರಿ ಪ್ರಶಸ್ತಿ ಹಾಗೂ ಮಂಜುನಾಥ ಹೆಗಡೆ ಅವರಿಗೆ ಎಂ. ಎಲ್. ಜೋಷಿ ಹೆಸರಿನಲ್ಲಿ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಗಿರಿಜಾ ಶಂಕರ್‌ ಮಾತನಾಡಿದರು. ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಾಕಾರದ ಗೌರವಾಧ್ಯಕ್ಷೆ  ನಾಗರತ್ನಾ ಎನ್. ಹಡಗಲಿ, ಕಾರ್ಯಾಧ್ಯಕ್ಷೆ ಡಾ. ಶುಭದಾ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.