ಶಿವಮೊಗ್ಗ: ‘ಧರ್ಮಸ್ಥಳದ ಬಗ್ಗೆ ವೃಥಾ ಅಪಪ್ರಚಾರ ಮಾಡಿದವರು, ಸುಳ್ಳು ದೂರು ಕೊಟ್ಟವರನ್ನು ಸರ್ಕಾರ ಈಗ ಜೈಲಿಗೆ ಹಾಕಲು ಹೊರಟಿದೆ. ಮೊದಲು ಬುದ್ಧಿ ಇರಲಿಲ್ಲವಾ’ ಎಂದು ಪ್ರಶ್ನಿಸಿದ ಸಂಸದ ಬಿ.ವೈ.ರಾಘವೇಂದ್ರ, ‘ಎಸ್‌ಐಟಿ ತನಿಖೆಯ ಬಗ್ಗೆ ನಾಡಿನ ಜನರಿಗೆ ವಿಶ್ವಾಸವಿಲ್ಲ. ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿ’ ಎಂದು ಆಗ್ರಹಿಸಿದರು.
‘ಧರ್ಮಸ್ಥಳಕ್ಕೆ ಕಳಂಕ ತರಲು ಒಳಸಂಚು ನಡೆದಿದೆ’ ಎಂದು ಅರೋಪಿಸಿ ಬಿಜೆಪಿಯಿಂದ ಶನಿವಾರ ಇಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
‘ಎಸ್ಐಟಿ ತನ್ನ ಜವಾಬ್ದಾರಿ ಮರೆತು, ಮೂಲ ವಿಚಾರ ಚರ್ಚಿಸದೇ ದೂರುದಾರ ಯಾರು? ಅವನ ಹಿನ್ನೆಲೆ ಏನು? ಎಂದು ವಿಚಾರಿಸದೇ ಅತ ತೋರಿಸಿದ ಕಡೆಯಲ್ಲೆಲ್ಲಾ ಗುಂಡಿ ತೋಡಿ ಹಿಂದೂಗಳ ಶ್ರದ್ಧಾಕೇಂದ್ರಕ್ಕೆ ಅಪಮಾನ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮೊದಲು ತಿರುಪತಿ, ನಂತರ ಅಯೋಧ್ಯೆ, ಬಳಿಕ ಅಯ್ಯಪ್ಪಸ್ವಾಮಿ, ಈಗ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಕೆಲವು ಬೇರೆ ಧರ್ಮದವರು ಮತ್ತು ಎಡಪಂಥೀಯರು ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಅದಕ್ಕೆ ಪರೋಕ್ಷವಾಗಿ ಶಕ್ತಿ ತುಂಬುತ್ತಿದೆ’ ಎಂದರು.
‘12 ವರ್ಷಗಳ ಹಿಂದೆ ನಡೆದ ಸೌಜನ್ಯಾ ಪ್ರಕರಣದ ತನಿಖೆ ಈಗಾಗಲೇ ಹಲವು ಸಂಸ್ಥೆಗಳು ನಡೆಸಿ ಧರ್ಮಸ್ಥಳಕ್ಕೂ ಆ ಕೃತ್ಯಕ್ಕೂ ಸಂಬಂಧವಿಲ್ಲ ಎಂದು ವರದಿ ನೀಡಿವೆ. ಹಾಗಿದ್ದರೂ ವಿನಾಕಾರಣ ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸಲಾಯಿತು. ಧರ್ಮಸ್ಥಳದ ವಿರುದ್ಧದ ಈ ಷಡ್ಯಂತ್ರ ವಿರೋಧಿಸಿ, ರಾಜ್ಯದೆಲ್ಲೆಡೆ ಬಿಜೆಪಿ ಧರ್ಮ ಯುದ್ಧ ಹಮ್ಮಿಕೊಂಡಿದೆ. ನಮ್ಮ ಧರ್ಮ ಮತ್ತು ಸಂಸ್ಕೃತಿ, ಧಾರ್ಮಿಕ ಅಸ್ಮಿತೆಗೆ ಧಕ್ಕೆ ಬಂದರೆ ರಸ್ತೆಗಿಳಿಯಲು ಸಿದ್ಧ ಎಂಬ ಸಂದೇಶವನ್ನು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವ ಮಹಿಳೆಯರು ನೀಡಿದ್ದಾರೆ. ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ’ ಎಂದರು.
ಸಭೆಗೂ ಮುನ್ನ ಪಕ್ಷದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಜ್ಞಾನೇಶ್ವರ್, ಮೋಹನ್ ರೆಡ್ಡಿ, ಜ್ಯೋತಿಪ್ರಕಾಶ್, ಮಾಲತೇಶ್, ದೀನದಯಾಳ್, ರಶ್ಮಿ ಶ್ರೀನಿವಾಸ್, ನಾಗರಾಜ್, ಸುನಿತಾ ಅಣ್ಣಪ್ಪ, ಮಂಜುನಾಥ್, ರಾಹುಲ್ ಬಿದರೆ, ವಿಶ್ವನಾಥ್, ಸಂಗೀತಾ ನಾಗರಾಜ್ ಇದ್ದರು.
ಎಡಪಂಥೀಯರು ಮತ್ತು ಧರ್ಮ ವಿರೋಧಿಗಳ ಷಡ್ಯಂತ್ರದಿಂದ ಸರ್ಕಾರ ಎಸ್ಐಟಿ ರಚಿಸಿತ್ತು. ಹಿಂದೂಗಳ ಧಾರ್ಮಿಕ ನಂಬಿಕೆಗೆ ಚ್ಯುತಿ ತಂದಿರುವ ಈ ಸರ್ಕಾರವನ್ನು ಮಂಜುನಾಥಸ್ವಾಮಿ ಕ್ಷಮಿಸಲ್ಲಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ
ದೇಶದಲ್ಲಿ ಹಲವು ವರ್ಷಗಳಿಂದ ಹಿಂದೂಗಳ ಶ್ರದ್ಧಾಕೇಂದ್ರಗಳ ವಿರುದ್ಧ ಅಪಪ್ರಚಾರ ಮತ್ತು ದೌರ್ಜನ್ಯ ನಡೆಯುತ್ತಾ ಬಂದಿವೆ. ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಕೂಡ ಅದರ ಒಂದು ಭಾಗಆರ್.ಕೆ. ಸಿದ್ರಾಮಣ್ಣ ವಿಧಾನ ಪರಿಷತ್ ಮಾಜಿ ಸದಸ್ಯ
ಷಡ್ಯಂತ್ರಕ್ಕೆ ಕಾಂಗ್ರೆಸ್ ಶಕ್ತಿ ಕೊಟ್ಟಿದೆ: ಚೆನ್ನಿ ಆರೋಪ
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ ‘ಮಹೇಶ ಶೆಟ್ಟಿ ತಿಮರೋಡಿ ಮಾತು ಕೇಳಿ ಎಸ್ಐಟಿ ಮುಂದುವರಿಸುತ್ತಿರುವುದು ಸರಿಯಲ್ಲ. ಈಗ ಎಲ್ಲವೂ ಬೆಳಕಿಗೆ ಬರುತ್ತಿದೆ. ಕೆಲವು ನಕಲಿ ಹಿಂದೂ ಹೋರಾಟಗಾರರು ಷಡ್ಯಂತ್ರ ಮಾಡುವವರ ಜೊತೆಗೆ ಕೈ ಜೋಡಿಸಿದ್ದಾರೆ. ಇವರಿಗೆಲ್ಲಾ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ’ ಎಂದು ಆರೋಪಿಸಿದರು. ‘ಎಸ್ಐಟಿ ರಚನೆ ಕೂಡ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಭಾಗ. ಹಿಂದೂ ಧರ್ಮದ ರಕ್ಷಣೆಗೆ ಶಕ್ತಿ ಕೊಡಿ ಎಂದು ನಾವೆಲ್ಲರೂ ಹೋಗಿ ಮಂಜುನಾಥನ ಸನ್ನಿಧಿಯಲ್ಲಿ ಬೇಡಿ ಬಂದಿದ್ದೇವೆ. ಷಡ್ಯಂತ್ರದ ಹಿಂದಿನ ಸತ್ಯ ಹೊರಗೆ ಬಂದೇ ಬರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.