ADVERTISEMENT

ನಿರ್ಮಲ ತುಂಗಭದ್ರಾ: ಪಾದಯಾತ್ರೆಗೆ ನ.4ರಿಂದ ಚಾಲನೆ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ ಕೊ‍ಪ್ಪಳ ಜಿಲ್ಲೆ ಕಿಷ್ಕಿಂಧೆವರೆಗೆ ಜನಜಾಗೃತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 15:22 IST
Last Updated 14 ಆಗಸ್ಟ್ 2024, 15:22 IST
ಪ್ರೊ.ಬಿ.ಎಂ.ಕುಮಾರಸ್ವಾಮಿ
ಪ್ರೊ.ಬಿ.ಎಂ.ಕುಮಾರಸ್ವಾಮಿ   

ಶಿವಮೊಗ್ಗ: ‘ತುಂಗಭದ್ರಾ ನದಿಯ ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಲು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆ ಗಂಗಾವತಿ ಸಮೀಪದ ಕಿಷ್ಕಿಂಧೆವರೆಗೆ ನವೆಂಬರ್ 4ರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು.

‘ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪರ್ಯಾವರಣ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಜನ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

‘ತುಂಗಾ ಮತ್ತು ಭದ್ರಾ ನದಿಗಳು ಶೃಂಗೇರಿ ಸಮೀಪದ ಗಂಗಡಿಕಲ್ಲು ಹಾಗೂ ನೆಲ್ಲಿಬೀಡು ಪ್ರದೇಶಗಳಲ್ಲಿ ಜನಿಸಿ ಹರಿದು ಬರುತ್ತವೆ. ಜನವಸತಿ ಪ್ರದೇಶಗಳಲ್ಲಿನ ಮಲಿನ ನೀರು ಹಾಗೂ ಕೈಗಾರಿಕಾ ತ್ಯಾಜ್ಯ ನೇರವಾಗಿ ಅವುಗಳ ಒಡಲು ಸೇರುತ್ತಿವೆ. ಇದರಿಂದ ನದಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ಅಂಶ ಪ್ರಯೋಗಾಲಯದ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇದು ನಿಜಕ್ಕೂ ಆಘಾತಕಾರಿ’ ಎಂದರು.

‘ಈ ನಿಟ್ಟಿನಲ್ಲಿ ನಮ್ಮ ತಂಡವು ಸರ್ಕಾರ ಹಾಗೂ ಸಾರ್ವಜನಿಕರ ಗಮನ ಸೆಳೆದು ಕಲುಷಿತ ತುಂಗಭದ್ರೆಯನ್ನು ನಿರ್ಮಲವಾಗಿಸುವ ಸಂಕಲ್ಪದೊಂದಿಗೆ 400 ಕಿ.ಮೀ.ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ  ಸಂಚಾಲಕ ಬಸವರಾಜ ಪಾಟೀಲ್ ಮಾರ್ಗದರ್ಶನದಲ್ಲಿ ಪಾದಯಾತ್ರೆಯ ರೂಪುರೇಷೆ ಸಿದ್ಧ‍ಪಡಿಸಲಾಗಿದೆ. ಶೃಂಗೇರಿ, ತೀರ್ಥಹಳ್ಳಿ, ಹೊನ್ನಾಳಿ, ಹರಿಹರ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಈಗಾಗಲೇ ಒಂದು ಸುತ್ತಿನ ಸಭೆ ಕೂಡ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸಮಾಜದ ಎಲ್ಲ ಸ್ತರದ ಜನರು, ಸಂಘ– ಸಂಸ್ಥೆಗಳು, ಪರಿಸರಾಸಕ್ತರು, ತುಂಗಭದ್ರಾ ನೀರಿನ ಬಳಕೆದಾರರು ಈ ಅಭಿಯಾನದ ಭಾಗಿದಾರರಾಗಬೇಕೆಂಬುದು ನಮ್ಮ ಅಪೇಕ್ಷೆ. ಶೃಂಗೇರಿ, ಹರಿಹರಪುರ, ಬಾಳಗಾರು, ಕೂಡಲಿ, ಶಿವಮೊಗ್ಗ, ಹೊನ್ನಾಳಿ, ಹರಿಹರದ ವಿವಿಧ ಮಠಾಧೀಶರು ಈ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ. ಗೌರಿಗದ್ದೆಯ ವಿನಯ್ ಗುರೂಜಿ ಕೂಡ ಭಾಗಿಯಾಗುತ್ತಿದ್ದಾರೆ’ ಎಂದರು.

ಆಂದೋಲನದ ಪ್ರಮುಖರಾದ ಗಿರೀಶ್ ಪಟೇಲ್, ಎಂ.ಬಿ.ಅಶೋಕ್‌ ಕುಮಾರ್, ಎಂ.ಶಂಕರ್, ದಿನೇಶ್ ಶೇಟ್, ಬಾಲಕೃಷ್ಣ ನಾಯ್ಡು, ತ್ಯಾಗರಾಜ ಮಿತ್ಯಾಂತ, ಶ್ರೀಧರ್ ಉಡುಪ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.