ADVERTISEMENT

ಯಾವ ಧರ್ಮವೂ ಕೊಲೆ ಬೆಂಬಲಿಸೊಲ್ಲ: ವಿನಯ್‌ ಗುರೂಜಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 16:42 IST
Last Updated 30 ಜೂನ್ 2022, 16:42 IST
ವಿನಯ್‌ ಗುರೂಜಿ
ವಿನಯ್‌ ಗುರೂಜಿ   

ಶಿವಮೊಗ್ಗ: ‘ಯಾವ ಧರ್ಮವೂಕೊಲೆಯನ್ನು ಬೆಂಬಲಿಸುವುದಿಲ್ಲ. ಕೊಲೆಗಡುಕರು ಮಸೀದಿ ಮತ್ತು ದೇವಸ್ಥಾನಗಳಿಗೆ ಬರಲು ಸಮಾಜ ಬಿಡಬಾರದು. ಆಗ ಮಾತ್ರ ಅಮಾಯಕರ ಪ್ರಾಣ ಹಾನಿಯಾಗುವುದನ್ನು ತಪ್ಪಿಸಬಹುದು’ ಎಂದು ಗೌರಿಗದ್ದೆಯ ವಿನಯ್ ಗುರೂಜಿ ಅಭಿಪ್ರಾಯಪಟ್ಟರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯ ಲಾಲ್‌ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಲು ಬಂದಾಗ ಅಕ್ಕಪಕ್ಕದವರು ಏನು ಮಾಡುತ್ತಿದ್ದರು? ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ‌ಲೂ ಅಕ್ಕಪಕ್ಕದ ಅಂಗಡಿಯವರು ಸುಮ್ಮನಿದ್ದರು. ಇದೇನಾ ನಮ್ಮ ಜವಾಬ್ದಾರಿ’ ಎಂದು ಪ್ರಶ್ನಿಸಿದರು.

‘ಧರ್ಮದ ಮೂಲ ತಿರುಳು ಮನುಷ್ಯತ್ವ ಹಾಗೂ ಎಲ್ಲರನ್ನೂ ಪ್ರೀತಿಸುವುದು. ಕೊಲೆ ಮಾಡುವ ಮನೋಭಾವದವರು ನೈಜ ಮುಸ್ಲಿಂ ಅಥವಾ ಹಿಂದೂ ಆಗಲು ಸಾಧ್ಯವಿಲ್ಲ. ಎಲ್ಲ ಧರ್ಮಗಳಲ್ಲೂ ಶಾಂತಿ ಮಂತ್ರವನ್ನೇ ಹೇಳಲಾಗಿದೆ. ಭಾಷೆ ಬೇರೆಯಾಗಿದ್ದರೂ ಭಾವ ಒಂದೇ. ನಾವು ಆ ಭಾವ ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕೃಷ್ಣ ಆಯುಧ ಎತ್ತಿದ್ದು ಅಮಾಯಕರ ಮೇಲೆ ಅಲ್ಲ; ರಾಕ್ಷಸರ ಮೇಲೆ. ಯಾವ ಧರ್ಮವೂ ಅಮಾಯಕರನ್ನು ಕೊಲೆ ಮಾಡಿ ಎಂದು ಹೇಳಿಲ್ಲ. ಆದರೆ, ಇಂತಹ ಘಟನೆಗಳು ಸಂಭವಿಸಿದಾಗ ಸಮಾಜ ಪ್ರತಿಕ್ರಿಯಿಸಬೇಕು. ಇಂತಹ ಕೃತ್ಯ ನಡೆಸುವವರಿಗೆ ಮೊದಲು ನಾಲ್ಕು ಸರಿಯಾಗಿ ತದುಕಬೇಕು. ಆಮೇಲೆ ಪೊಲೀಸರಿಗೆ ಒಪ್ಪಿಸಬೇಕು. ತಪ್ಪು ಮಾಡಿದವರ ವಿರುದ್ಧ ಸರ್ಕಾರ ನಿಷ್ಠುರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

***

ಕೊಲೆ ಮಾಡಿ ಸಾಮಾಜಿಕ ಜಾಲ ತಾಣಕ್ಕೆ ಹಾಕಿದರೆ ಇನ್ನೊಂದು ಹತ್ತು ಜನರಿಗೆ ಪ್ರಚೋದನೆ ಆಗುತ್ತದೆ. ಸರ್ಕಾರ ಕಠಿಣ ಕ್ರಮ ಕೈಗೊಂಡರೆ ಮಾತ್ರ ಇನ್ನೊಬ್ಬರು ಆ ಕೆಲಸ ಮಾಡೊಲ್ಲ.
-ವಿನಯ್‌ ಗುರೂಜಿ, ಗೌರಿಗದ್ದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.