ADVERTISEMENT

ಕಾರ್ಗಲ್‌ | ರಸ್ತೆ ಇಲ್ಲದೆ ಪರದಾಟ; ​​​​​​​ಕೋಲಿಗೆ ಬಟ್ಟೆ ಕಟ್ಟಿ ವೃದ್ಧೆಯ ಸಾಗಾಟ

ಜೋಗ–ಕಾರ್ಗಲ್‌ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾಲೊನಿಗಿಲ್ಲ ರಸ್ತೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 16:10 IST
Last Updated 31 ಮೇ 2022, 16:10 IST
   

ಕಾರ್ಗಲ್‌: ಪಾರ್ಶ್ವವಾಯು ಪೀಡಿತ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಸರಿಯಾದ ರಸ್ತೆ ಇಲ್ಲದ ಕಾರಣ ಬಿದಿರಿನ ಕೋಲಿಗೆ ಬೆಡ್‌ಶೀಟ್‌ ಕಟ್ಟಿ ಅದರಲ್ಲಿ ರೋಗಿಯನ್ನು ಮಲಗಿಸಿ ಹೊತ್ತು ಸಾಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಜೋಗ–ಕಾರ್ಗಲ್‌ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಸ್‌ವಿಪಿ ಕಾಲೊನಿಯ ಚರ್ಚ್ ಮೌಂಟ್ ಹಿಂಭಾಗದ ಪ್ರದೇಶದಲ್ಲಿ ವಾಸವಾಗಿರುವ ಅಚ್ಚಮ್ಮ (75) ಎಂಬ ವೃದ್ಧೆಗೆ ಹಲವು ದಿನಗಳ ಹಿಂದೆ ಪಾರ್ಶ್ವವಾಯು ಆಗಿತ್ತು. ಅವರ ಮೊಮ್ಮಕ್ಕಳು ಅಜ್ಜಿಯನ್ನು ಪ್ರತಿ ತಿಂಗಳು ಕಾರವಾರದ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪ್ರತಿ ಬಾರಿಯೂ ಬಿದಿರು ಕೋಲಿಗೆ ಬಟ್ಟೆ ಕಟ್ಟಿ ಅದರಲ್ಲಿ ವೃದ್ಧೆಯನ್ನು ಮಲಗಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಸ್ಥಿತಿ ಇದೆ.

ಈ ಪ್ರದೇಶದಲ್ಲಿ 12 ಮನೆಗಳು ಇದ್ದು, 50 ಜನ ವಾಸವಾಗಿದ್ದಾರೆ. ಇವರ ಮನೆಯಿಂದ ಮುಕ್ಕಾಲು ಕಿ.ಮೀ ಪೂರ್ತಿ ಗುಡ್ಡಗಾಡು ಪ್ರದೇಶವಾಗಿದೆ. ಅಲ್ಲಿಂದ ಮುಂದೆ ಕೆಪಿಸಿ ಅವರು ನಿರ್ಮಿಸಿರುವ ಡಾಂಬರು ರಸ್ತೆ ಇದೆ. ಆದರೆ, ಮುಕ್ಕಾಲು ಕಿ.ಮೀ ಕಾಲುದಾರಿಯಲ್ಲಿ ನಡೆಯುವುದು ಅನಿವಾರ್ಯವಾಗಿದೆ.

ADVERTISEMENT

ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ: ‘ರಸ್ತೆ ನಿರ್ಮಿಸಿಕೊಡುವಂತೆ ಪಟ್ಟಣ ಪಂಚಾಯಿತಿ ಮತ್ತು ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದ್ರೂ ಏನೂ ಪ್ರಯೋಜನವಾಗಿಲ್ಲ. ಬೇಸಿಗೆಯ ದಿನಗಳಲ್ಲಿ ಹರಸಾಹಸಪಟ್ಟು ಹೇಗೋ ನಡೆದು ಹೋಗಬಹುದು. ಆದರೆ, ಮಳೆಗಾಲದಲ್ಲಿ ಅಸಾಧ್ಯ. ಇಳಿಜಾರು ಪ್ರದೇಶದಲ್ಲಿ ಸಾಮಾನು ಹೊತ್ತು ಸಾಗುವುದೇ ಸವಾಲು. ಅಂತಹುದರಲ್ಲಿ ಆರೋಗ್ಯ ಹದಗೆಟ್ಟರೆ ಹೊತ್ತು ಸಾಗಿಸಬೇಕಾದ ಅನಿವಾರ್ಯತೆ ಇದೆ. ರಸ್ತೆ ನಿರ್ಮಿಸಿ ಕೊಡಬೇಕಿದ್ದ ಪಂಚಾಯಿತಿ ಆಡಳಿತದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಸ್ಥಳೀಯರು ದೂರಿದ್ದಾರೆ.

*

ನಮಗೂ ಘಟನೆಯಿಂದ ಆಘಾತವಾಗಿದೆ. ಶಾಸಕರ ಜೊತೆ ಚರ್ಚಿಸಿ ಕೂಡಲೇ ರಸ್ತೆ ನಿರ್ಮಿಸಿಕೊಡಲಾಗುವುದು. ಈಗಾಗಲೇ ಉಪ ತಹಶೀಲ್ದಾರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿನ ಕುಟುಂಬಗಳಿಗೆ ಅಗತ್ಯ ಸೌಕರ್ಯ ಒದಗಿಸಲಾಗುವುದು.
– ವಸಂತಿ ರಮೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ
*
ಅಲ್ಲಿನ ಜನರಿಗೆ ರಸ್ತೆ ನಿರ್ಮಿಸಿಕೊಡುವಂತೆ ಅನೇಕ ಬಾರಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
– ಎನ್. ರಾಜು, ಪಟ್ಟಣ ಪಂಚಾಯಿತಿ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.