ADVERTISEMENT

ಕೆಇಬಿ ಭವನ: ನಾಳೆಯಿಂದ ಓಣಂ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 11:23 IST
Last Updated 4 ಅಕ್ಟೋಬರ್ 2019, 11:23 IST

ಶಿವಮೊಗ್ಗ: ಕೆಇಬಿ ಸಮುದಾಯ ಭವನದಲ್ಲಿ ಅ.6ರಂದು ಓಣಂ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕೇರಳ ಸಮಾಜಂ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್ ಹೇಳಿದರು.

ಓಣಂ ಕೇರಳದ ಬಹುದೊಡ್ಡ ಕೊಯ್ಲು ಹಬ್ಬ. ಕಳೆದ 40 ವರ್ಷಗಳಿಂದ ಶಿವಮೊಗ್ಗದಲ್ಲಿ ಈ ಹಬ್ಬ ಆಚರಿಸಿಕೊಂಡು ಬಂದಿದ್ದೇವೆ. ಈ ಬಾರಿ ನೆರೆಹಾನಿಯ ಪರಿಣಾಮ ಸರಳವಾಗಿ ಆಚರಿಸಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಕೇರಳ ಸಮಾಜ ಸಾಕಷ್ಟು ಪರಿಹಾರ ಸಾಮಾಗ್ರಿಗಳನ್ನು ನೀಡಿದೆ. ಜನರ ಸಂಕಷ್ಟದಲ್ಲಿ ಸದಾ ಭಾಗಿಯಾಗಿದೆ ಎಂದರು.

ADVERTISEMENT

10 ದಿನಗಳು ಈ ಹಬ್ಬ ಆಚರಿಸಲಾಗುವುದು. ಮೊದಲ ದಿನ ಅತ್ತಂ ಆದರೆ, 10ನೇ ದಿವಸ ಆಚರಿಸುವ ತಿರುಓಣಂ. ಈ ಹಬ್ಬದಲ್ಲಿ ಜಾನಪದ ಗೀತೆ, ನೃತ್ಯ, ಆಟಗಳು, ಕಥಕ್ಕಳಿ, ಸುಂದರ ರಂಗೋಲಿ, ಆನೆಗಳ ಮೆರವಣಿಗೆ ಇರುತ್ತದೆ. 28ರಿಂದ 30 ಬಗೆಬಗೆಯ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ ಎಂದು ವಿವರ ನೀಡಿದರು.

ಶಿವಮೊಗ್ಗದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಜನರಿದ್ದೇವೆ. ಎಲ್ಲ ಕೇರಳಿಯನ್ನರು ಒಟ್ಟಾಗಿ ಸೇರುವುದೇ ಒಂದು ಸಂಭ್ರಮ. ಇಲ್ಲಿ ಜಾತಿ ಮತ್ತು ಧರ್ಮದ ಬೇಧವಿಲ್ಲ. ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಹಿಂದುಗಳೆಲ್ಲರೂ ಸೇರಿಕೊಂಡು ಈ ಹಬ್ಬ ಆಚರಿಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಅ.6ರಂದು ಬೆಳಿಗ್ಗೆ 11ಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್, ಕೇರಳ ಸಮಾಜದ ಮಹಿಳಾ ಅಧ್ಯಕ್ಷೆ ನಿರ್ಮಲಾ ಕಾಶಿ ಉಪಸ್ಥಿತರಿರುವರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿ.ಪ್ರಮೋದ್, ಸುರೇಶ್ ಕುಮಾರ್, ಶಾಂತಾ ನಾಯಕ್, ದೇವಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.