ADVERTISEMENT

ಕ್ವಿಂಟಲ್‌ ಭತ್ತ, ಮೆಕ್ಕೆಜೋಳಕ್ಕೆ ₹ 3 ಸಾವಿರ: ರೈತ ಸಂಘ ಒತ್ತಾಯ

ರೈತ ಸಂಘದ ಎಚ್.ಆರ್. ಬಸವರಾಜಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 5:15 IST
Last Updated 17 ನವೆಂಬರ್ 2021, 5:15 IST
ಎಚ್.ಆರ್.ಬಸವರಾಜಪ್ಪ
ಎಚ್.ಆರ್.ಬಸವರಾಜಪ್ಪ   

ಶಿವಮೊಗ್ಗ: ರಾಜ್ಯ ಸರ್ಕಾರ ಕ್ವಿಂಟಲ್ ಭತ್ತ, ಮೆಕ್ಕೆಜೋಳಕ್ಕೆ ₹ 3 ಸಾವಿರ, ರಾಗಿಗೆ ₹ 4 ಸಾವಿರ ನಿಗದಿ ಮಾಡಬೇಕು. ತಕ್ಷಣ ಖರೀದಿ ಕೇಂದ್ರ ಆರಂಭಿಸಬೇಕು. ಮಳೆ ಹಾನಿ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಒತ್ತಾಯಿಸಿದರು.

ಜಿಲ್ಲೆಯಲ್ಲಿ 78 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, 53 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ರಾಜ್ಯದಲ್ಲಿ 10.22 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ, 14.16 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 6.90 ಲಕ್ಷ ಹೆಕ್ಟೇರ್‌ನಲ್ಲಿ ರಾಗಿ ಬೆಳೆದಿದ್ದಾರೆ. ಈ ವರ್ಷ ಸಮೃದ್ಧ ಮಲೆಯ ಕಾರಣ ಒಳ್ಳೆಯ ಫಸಲು ಬಂದಿದೆ. ಮಳೆ ನಿಲ್ಲದ ಕಾರಣ ಬೆಳೆ ನಷ್ಟವಾಗಿದೆ. ಸರ್ಕಾರ ನ್ಯಾಯಯುತ ಬೆಲೆ ಕೊಟ್ಟು ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಎಲ್ಲ ವಸ್ತುಗಳ ಬೆಲೆಗಳೂ ಗಗನಕ್ಕೇರಿವೆ. ದುಬಾರಿ ಕೂಲಿ, ರಸಗೊಬ್ಬರ, ಕೀಟನಾಶಕಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ರೈತರ ಜೀವನ ವೆಚ್ಚವೂ ಜಾಸ್ತಿಯಾಗಿದೆ. ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲ. ಸಾಲ ತೀರಿಸಲಾಗುತ್ತಿಲ್ಲ, ಸಾಲದ ಹೊರೆ ಜಾಸ್ತಿಯಾಗಿ ಜೀವನ ನಿರ್ವಹಣೆ ದುಸ್ತರವಾಗಿದೆ. ರೈತರು ಬ್ಯಾಂಕ್ ಸಾಲ, ಸಹಕಾರಿ ಸಾಲ, ಖಾಸಗಿ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಬಾರಿಯೂ ಬೆಲೆ ಕುಸಿದಿದೆ. ವರ್ತಕರು ಬೆಲೆ ಕುಸಿತದ ಲಾಭ ಪಡೆದು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ನಂತರ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ಇದ್ದರಿಂದ ಬೆಳೆ ಬೆಳೆಯುವ ರೈತ, ಕೊಂಡು ತಿನ್ನುವ ಗ್ರಾಹಕರಿಗೆ ಈ ಲಾಭ ದೊರಕುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ರಾಜ್ಯ ಸರ್ಕಾರ ಕೊಪ್ಪಳ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಭತ್ತ ಖರೀದಿಗೆ ಆದೇಶಿಸಿದೆ. ಶಿವಮೊಗ್ಗ ಸೇರಿ ಉಳಿದ ಜಿಲ್ಲೆಗಳ ಭತ್ತ ಬೆಳೆಗಾರರ ನೆರವಿಗೆ ಬಂದಿಲ್ಲ. ಮೆಕ್ಕೆಜೋಳ ಖರೀದಿಗೂ ನಿರ್ಧಾರ ಮಾಡಿಲ್ಲ. ತಕ್ಷಣವೇ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಮಳೆ ಹಾನಿ ಪರಿಹಾರ ನೀಡಲು ತಕ್ಷಣ ಬೆಳೆ ಸಮೀಕ್ಷೆ ಮಾಡಬೇಕು. ಹಿಂದಿನ ವರ್ಷ ಮನೆ ಕಳೆದುಕೊಂಡ ಜನರು ಅರ್ಧ ಮನೆ ಕಟ್ಟಿಸಿ ನಿಲ್ಲಿಸಿದ್ದಾರೆ. ಅವರಿಗೆ ಹಣ ಪಾವತಿಯಾಗಿಲ್ಲ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು. ಹಿಂಗಾರು ಬಿತ್ತನೆಗೆ, ತೋಟದ ಬೆಳೆಗಳಿಗೆ ರಸಗೊಬ್ಬರ ಪೂರೈಸಬೇಕು. ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಕೆ.ರಾಘವೇಂದ್ರ, ಹಿಟ್ಟೂರು ರಾಜು, ಇ.ಬಿ.ಜಗದೀಶ್, ಎಂ.ಡಿ.ನಾಗರಾಜ್, ಸಿ.ಚಂದ್ರಪ್ಪ, ಜ್ಞಾನೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.