ADVERTISEMENT

ಬೀದಿ ಬದಿ ವ್ಯಾಪಾರಕ್ಕೆ ಒಂದೇ ಸೂರು

ಶಿರಾಳಕೊಪ್ಪ ಪುರಸಭೆಯಿಂದ ಪುಡ್‌ ಕೋರ್ಟ್‌ ನಿರ್ಮಾಣ

ಎಂ.ನವೀನ್ ಕುಮಾರ್
Published 28 ಜುಲೈ 2022, 5:00 IST
Last Updated 28 ಜುಲೈ 2022, 5:00 IST
ಟಿ.ರಾಜು
ಟಿ.ರಾಜು   

ಶಿರಾಳಕೊಪ್ಪ: ಪಟ್ಟಣದ ಬೀದಿಗಳಲ್ಲಿ ತಿಂಡಿ,ತಿನಿಸು ವ್ಯಾಪಾರ ಮಾಡುವ ಫುಟ್‌ಪಾತ್ ವ್ಯಾಪಾರಿಗಳಿಗೆ ಶಾಶ್ವತ ಸೂರು ಕಲ್ಪಿಸಿಕೊಡಲು ಪುರಸಭೆಯಿಂದ ಫುಡ್‌ಕೋರ್ಟ್‌ ನಿರ್ಮಾಣ ಮಾಡುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ.

ಒಂದೇ ಸೂರಿನಡಿ ಪಟ್ಟಣದ ಎಲ್ಲಾ ತಿಂಡಿ,ತಿನಿಸು ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಕಾರ್ಯವನ್ನು ಪುರಸಭೆ ಮಾಡುತ್ತಿದೆ.

ಇಲ್ಲಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ಜೊತೆಗೆ ಸಾರ್ವಜನಿಕರು ಸೇವಿಸುವ ತಿಂಡಿ,ತಿನಿಸುಗಳ ಗುಣಮಟ್ಟ ರಕ್ಷಣೆ , ಸಾರ್ವಜನಿಕ ಸ್ವಚ್ಚತೆ ಹಾಗೂ ಶುದ್ಧ ಕುಡಿಯುವ ನೀರನ್ನು ಜನರಿಗೆ ನೀಡುವ ಹೊಣೆ ಸಹ ಪುರಸಭೆ ಹೊತ್ತುಕೊಂಡಿದೆ. ಈ ಮೂಲಕ ಪಟ್ಟಣದ ಜನರ ಆರೋಗ್ಯ ಕಾಪಾಡಲು ಪುರಸಭೆ ಒಂದು ಹೆಜ್ಜೆ ಇಟ್ಟಿದೆ.

ADVERTISEMENT

ಪುಡ್‌ ಕೋರ್ಟ್‌ ಪ್ರತಿ ಕೌಂಟರ್‌ನಲ್ಲಿ ನಿರಂತರ ನೀರಿಗಾಗಿ ನಲ್ಲಿಯ ವ್ಯವಸ್ಥೆ ಮಾಡಲಾಗಿದೆ, ವಾಶ್‌ಬೇಸನ್, ಅಡುಗೆ ಮಾಡುವ ಒಲೆಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.

ಕಿಲೋ ಮೀಟರ್‌ ದೂರದಿಂದ ಗಾಡಿ ತಳ್ಳಿಕೊಂಡು ಬರುತ್ತಿದ್ದ ವ್ಯಾಪಾರಿಗಳಿಗೆ ಆ ತಾಪತ್ರಯ ತಪ್ಪಿರುವುದು ಹರ್ಷ ತಂದಿದೆ. ಜಿಲ್ಲಾ ಕೇಂದ್ರ ಹೊರತು ಪಡಿಸಿ, ಪಟ್ಟಣದಲ್ಲಿಯೇ ಈ ಕಾರ್ಯ ಮೊದಲು ನಡೆದಿದೆ.

ಪುಡ್‌ ಕೋರ್ಟ್‌ ನಿರ್ಮಾಣ ಮಾಡಲು ಉದ್ಯಮ ನಿಧಿಯಿಂದ ₹97 ಲಕ್ಷ ವಿನಿಯೋಗಿಸಿ 40 ಕ್ಕೂ ಹೆಚ್ಚು ಅಂಗಡಿಗಳನ್ನು ಸಿದ್ಧಪಡಿಸಲಾಗಿದೆ. ಒಂದು ವಿಭಾಗದಲ್ಲಿ ಪಾನಿಪುರಿ, ಗೋಬಿ, ಮಂಡಕ್ಕಿ ಸೇರಿದಂತೆ ಹಲವಾರು ಸಸ್ಯಹಾರಿ ಉಪಹಾರಗಳು, ಇನ್ನೊಂದು ವಿಭಾಗದಲ್ಲಿ ಮಾಂಸಹಾರಿ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಯಲ್ಲಿಯೇ ಹೂ,ಹಣ್ಣಿನ ವ್ಯಾಪಾರಿಗಳಿಗೆ ಪ್ರತ್ಯೇಕ ಶೆಡ್‌ ಕಲ್ಪಿಸಲಾಗಿದೆ.

***

ರಸ್ತೆ ಬದಿಯಲ್ಲಿ ವಹಿವಾಟು ನಡೆಸು ತ್ತಿರುವ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕೆಲಸವನ್ನು ವಿಶೇಷ ಕಾಳಜಿ ವಹಿಸಿ ಮಾಡಿದ್ದೇವೆ. ಹೂ, ಹಣ್ಣು ಹಾಗೂ ತರಕಾರಿ ವ್ಯಾಪಾರಿಗಳಿಗೆ ಪ್ರತ್ಯೇಕವಾಗಿ ಶೆಡ್‌ ಸಹ ನಿರ್ಮಾಣ ಮಾಡಲಾಗುತ್ತಿದೆ.

ಟಿ.ರಾಜು, ಪುರಸಭೆ ಸದಸ್ಯ

***

ಸಂಸದ ಬಿ.ವೈ.ರಾಘವೇಂದ್ರ ಮಾರ್ಗದರ್ಶನದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪ್ರತ್ಯೇಕ ಶೆಡ್‌ ನಿರ್ಮಾಣ ಮಾಡುತ್ತಿದ್ದೇವೆ. ಪಟ್ಟಣದಲ್ಲಿರುವ ಎಲ್ಲಾ 120 ಬೀದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಹೇಮಂತ ಡೊಳ್ಳೆ, ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.