ADVERTISEMENT

ಭದ್ರಾವತಿ: ನಗರಸಭೆ ತೆರಿಗೆ ಹೆಚ್ಚಳ ಪ್ರಸ್ತಾವಕ್ಕೆ ವಿರೋಧ

ವಿಶೇಷ ಸಾಮಾನ್ಯ ಸಭೆಯಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 4:16 IST
Last Updated 8 ಏಪ್ರಿಲ್ 2022, 4:16 IST
ಭದ್ರಾವತಿ ನಗರಸಭೆಯಲ್ಲಿ ಗುರುವಾರ ಸಾಮಾನ್ಯ ಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಿತು
ಭದ್ರಾವತಿ ನಗರಸಭೆಯಲ್ಲಿ ಗುರುವಾರ ಸಾಮಾನ್ಯ ಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಿತು   

ಭದ್ರಾವತಿ: ಸರ್ಕಾರದ ಪೌರಾಡಳಿತ ಇಲಾಖೆಯ ತೆರಿಗೆ ಹೆಚ್ಚಳ ಪ್ರಸ್ತಾವಕ್ಕೆ ನಗರಸಭೆಯ ಎಲ್ಲಾ ಸದಸ್ಯರು ಪಕ್ಷಬೇಧ ಮರೆತು ವಿರೋಧ ವ್ಯಕ್ತಪಡಿಸಿದರೆ, ಅಧಿಕಾರಿಗಳು ಮಾತ್ರ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲು ವಿಫಲರಾದ ಪ್ರಸಂಗ ಗುರುವಾರ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಅಧ್ಯಕ್ಷೆ ಜೆ.ಸಿ. ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಹಿರಿಯ ಸದಸ್ಯ ಬಿ.ಟಿ. ನಾಗರಾಜ್, ‘ಬಜೆಟ್ ಸಭೆ ಹೊರತಾಗಿ ಎಲ್ಲಾ ಸಭೆಗಳು ವಿಶೇಷ ಸಭೆಯ ಹೆಸರಿನಲ್ಲಿ ನಡೆದರೆ ಜನರ ಸಮಸ್ಯೆಗಳಿಗೆ ಚರ್ಚಿಸುವ ಅವಕಾಶ ನಮಗೆ ಯಾವಾಗ ಸಿಗುತ್ತದೆ’ ಎಂದು ಪ್ರಶ್ನಿಸಿ, ‘ಪೌರಾಯುಕ್ತರ ಹಿಡಿತದಲ್ಲಿ ಅಧ್ಯಕ್ಷರು ಆಡಳಿತ ನಡೆಸಬಾರದು’ ಎಂದು ಸೂಚ್ಯವಾಗಿ ತಿಳಿಸಿದರು.

‘ತೆರಿಗೆ ಹೆಚ್ಚಳ ಪ್ರಸ್ತಾವದ ವಿಚಾರ ತುರ್ತಾಗಿ ಇತ್ಯರ್ಥ ಆಗಬೇಕಿರುವ ಕಾರಣ ಸಭೆ ಕರೆದಿದ್ದು ಇದನ್ನು ನನ್ನ ಬಳಿ ಚರ್ಚೆ ಮಾಡಿಯೇ ಪೌರಾಯುಕ್ತರು ನಿಗದಿಪಡಿಸಿದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಸಾಮಾನ್ಯಸಭೆ ನಡೆಸೋಣ’ ಎಂದು ಅಧ್ಯಕ್ಷೆ ಗೀತಾ ರಾಜಕುಮಾರ್ ಉತ್ತರಿಸಿದರು.

ADVERTISEMENT

‘ಸರ್ಕಾರದ ತೆರಿಗೆ ಹೆಚ್ಚಳ ಪ್ರಸ್ತಾವಕ್ಕೆ ನಮ್ಮ ಯಾವುದೇ ಬೆಂಬಲವಿಲ್ಲ. ಇದಕ್ಕೆ ಎಲ್ಲಾ ಸದಸ್ಯರ ವಿರೋಧ ಇದೆ’ ಎಂದು ಜೆಡಿಎಸ್ ಸದಸ್ಯ ಬಸವರಾಜ್ ಹೇಳಿದಾಗ ಎಲ್ಲ ಸದಸ್ಯರು ಅದನ್ನು ಸ್ವಾಗತಿಸಿದರು.

ಕಾಂಗ್ರೆಸ್ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ‘ಸರ್ಕಾರದ ಪ್ರಸ್ತಾವ ತಿರಸ್ಕರಿಸಿ ಬಿಜೆಪಿ ಸದಸ್ಯರು ಸೇರಿ ಎಲ್ಲರೂ ವಿರೋಧಿಸಿದ್ದಾರೆ’ ಎಂದು ಬರೆದು ಕಳುಹಿಸಿ ಎನ್ನುವ ಮೂಲಕ ಬಿಜೆಪಿ ಸದಸ್ಯರನ್ನು ಪರೋಕ್ಷವಾಗಿ ಕುಟುಕಿದರು.

ಮಾಜಿ ಅಧ್ಯಕ್ಷ ಬಿ.ಟಿ. ನಾಗರಾಜ್ ಮಾತನಾಡಿ, ‘ಇಲ್ಲಿನ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡದ ಕಾರಣ ತೆರಿಗೆ ಹೆಚ್ಚಳ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಮನವಿ ಮಾಡಿದರು.

ಕಂದಾಯಾಧಿಕಾರಿ ರಾಜಕುಮಾರ್, ‘ಜಿಲ್ಲೆಯ ಎಲ್ಲಾ ಪುರಸಭೆ, ನಗರಸಭೆಗಳು ಶೇ 3ರಷ್ಟು ತೆರಿಗೆ ಹೆಚ್ಚಳಕ್ಕೆ ಒಪ್ಪಿಗೆ ನೀಡಿವೆ. ನಾವು ಈಗ ಒಪ್ಪಿಗೆ ನೀಡದಿದ್ದರೆ ತೆರಿಗೆ ಪಾವತಿ ವಿವರದ ಕಂಪ್ಯೂಟರ್ ಪ್ರತಿ ಜನರೇಟ್ ಆಗುವುದಿಲ್ಲ. ಇದರಿಂದ ನಾಗರಿಕರಿಗೆ ಸಿಗುವ ಶೇ 5ರ ವಿನಾಯಿತಿ ಸಿಗುವುದಿಲ್ಲ’ ಎಂದರು.

ಪೌರಾಯುಕ್ತ ಪರಮೇಶ್, ‘ನಿಮ್ಮ ವಿರೋಧ ಸರ್ಕಾರಕ್ಕೆ ಕಳಿಸೋಣ. ಅಲ್ಲಿಯತನಕ ಕಂಪ್ಯೂಟರ್ ಜನರೇಟ್ ಆಗುವ ರೀತಿಯಲ್ಲಿ ಸಹಕಾರ ನೀಡಿ’ ಎಂದು ಮನವಿ ಮಾಡಿದರು.

ಸದಸ್ಯರಾದ ಕೋಟೇಶ್ವರರಾವ್, ಉದಯಕುಮಾರ್, ಮಂಜುಳಾ ಸುಬ್ಬಣ್ಣ, ವಿ. ಕದಿರೇಶ್, ಕರೀಗೌಡ ಮಾತನಾಡಿದರು.

ಇಂದಿನಿಂದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ:‘ಶುಕ್ರವಾರ ನಗರಸಭಾ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು’ ಎಂದು ಪರಿಸರ ಎಂಜಿನಿಯರ್ ಪ್ರಭಾಕರ್ ಹೇಳಿದಾಗಸದಸ್ಯರು ಶಸ್ತ್ರಚಿಕಿತ್ಸೆ ನಂತರ ಊರಿನ ಹೊರಗೆ ಅವುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.

ಮುಕ್ತಿವಾಹಿನಿಗೆ ರಾಹುಕಾಲ: ‘ನಗರಸಭೆಯ ಒಂದು ಮುಕ್ತಿವಾಹಿನಿ ಎಲ್ಲಾ 35 ವಾರ್ಡ್ ಸುತ್ತಬೇಕಿದೆ. ಶವ ಸಾಗಿಸಲು ಹತ್ತಾರು ಕರೆ ಬರುತ್ತದೆ ಎಲ್ಲಿಗೆ ಹೋಗುವುದು ಎಂಬ ಗೊಂದಲದಲ್ಲಿ ಚಾಲಕ ಒದ್ದಾಡುವ ಸ್ಥಿತಿ ಇದೆ. ಇನ್ನೊಂದು ವಾಹನ ಬೇಕಿದೆ’ ಎಂದು ಸದಸ್ಯ ಬಿ.ಟಿ. ನಾಗರಾಜ್ ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಸದಸ್ಯ ಮೋಹನ್ ಕುಮಾರ್ ಶವದ ಹತ್ತಿರ ವಾಹನ ಬಂದರೂ ರಾಹುಕಾಲ ಇದೆ. ಅದು ಮುಗಿಬೇಕು ಎಂದು ನೆರೆದವರು ವಾಹನ ಕಾಯಿಸುವ ಪರಿಸ್ಥಿತಿ ಇದೆ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.