ADVERTISEMENT

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 5:05 IST
Last Updated 18 ಡಿಸೆಂಬರ್ 2021, 5:05 IST

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎನ್‌ಎಸ್‌ಯುಐ (ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ) ತೀವ್ರವಾಗಿ ವಿರೋಧಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ಯಾವುದೇ ಅನುಕೂಲವಾಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮಾರಕವಾಗುತ್ತದೆ. ಈ ನೀತಿಯಿಂದ ವಿದ್ಯಾಭ್ಯಾಸವೇ ಕುಂಠಿತಗೊಳ್ಳುತ್ತದೆ ಎಂದು ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಯಾವುದೇ ಚರ್ಚೆ ಇಲ್ಲದೇ, ಶಿಕ್ಷಣ ತಜ್ಞರ ಜೊತೆ ಸಮಾಲೋಚಿಸದೇ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಇದರ ಸಾಧಕ–ಬಾಧಕಗಳೇ ಯಾರಿಗೂ ಗೊತ್ತಿಲ್ಲ. ವಿದ್ಯಾರ್ಥಿಗಳಿಗಿರಲಿ, ಶಿಕ್ಷಕರಿಗೂ ಈ ಬಗ್ಗೆ ಗೊಂದಲವಿದೆ. ಎರಡು, ಮೂರು ಹಾಗೂ ನಾಲ್ಕು ವರ್ಷಗಳಿಗೆ ಪದವಿ ನೀಡಲಾಗುತ್ತದೆ. ಬಹುತೇಕ ವಿದ್ಯಾರ್ಥಿಗಳು ಎರಡು ವರ್ಷದ ಪದವಿ ಪ್ರಮಾಣ ಪತ್ರ ಪಡೆದು ಮುಂದೆ ಓದುವುದನ್ನೇ ನಿಲ್ಲಿಸುತ್ತಾರೆ. ಹಾಗಾಗಿ ಶಿಕ್ಷಣದಿಂದ ವಂಚಿತರಾಗುವ ಸಂಖ್ಯೆ ಹೆಚ್ಚಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಈ ನೀತಿಯ ಹಿಂದೆ ಖಾಸಗೀ ಕರಣದ ಹುನ್ನಾರವಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಲಗ್ಗೆ ಹಾಕಿ ಶಿಕ್ಷಣ ವ್ಯವಸ್ಥೆಯನ್ನೇ ಗೊಂದಲಕ್ಕೀಡುಮಾಡುತ್ತಿವೆ. ಇದರಿಂದ ಶಿಕ್ಷಣದ ಸ್ವರೂಪವೇ ಬದಲಾಗುತ್ತದೆ. ಉದ್ಯಮಿಗಳು ಕೂಡ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಮಕ್ಕಳ ಶಿಕ್ಷಣ ಮಟ್ಟ ಕುಸಿಯುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಏಕಾಏಕಿ ಈ ಕಾಯ್ದೆಯನ್ನು ಜಾರಿಗೆ ತರಬಾರದು’ ಎಂದು ಆಗ್ರಹಿಸಿದರು.

‘ಕಾರ್ಪೊರೇಟ್‌ಗಳಿಗೆ ಮಣೆ ಹಾಕುವ, ಬಡವರ ವಿರೋಧಿ ಯಾಗಿರುವ ಈ ನೀತಿಯನ್ನು ಜಾರಿಗೆ ತರಲು ಹೊರಟಿರುವುದು ಸರ್ಕಾರದ ಹಸ್ತಕ್ಷೇಪವೇ ಆಗಿದೆ. ಪಠ್ಯ ಪುಸ್ತಕಗಳಲ್ಲಿಯೂ ಅನ್ಯ ವಿಷಯಗಳು ಸೇರಿಕೊಳ್ಳುವ ಅಪಾಯ ಕೂಡ ಇದೆ. ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗಲಿವೆ. ಆದ್ದರಿಂದ ಇದನ್ನು ಕೈಬಿಡಬೇಕು‘ ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಿ.ಜಿ. ಮಧುಸೂದನ್, ಕೆ. ಚೇತನ್, ಬಾಲಾಜಿ, ರವಿ, ವಿಜಯ್, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.