ADVERTISEMENT

ಪಾಕಿಸ್ತಾನದ ಪರ ಘೋಷಣೆ; ಕಠಿಣ ಕ್ರಮಕ್ಕೆ ಬಿವೈಆರ್ ಆಗ್ರಹ

-

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:22 IST
Last Updated 13 ಸೆಪ್ಟೆಂಬರ್ 2025, 5:22 IST
   

ಶಿವಮೊಗ್ಗ : ಈ ದೇಶದಲ್ಲಿ ಇದ್ದು, ಇಲ್ಲಿನ ಅನ್ನ ತಿಂದು ಶತ್ರುರಾಷ್ಟ್ರದ ಪರ ಘೋಷಣೆ ಕೂಗುವ ಮಾನಸಿಕತೆಯ ದುಷ್ಟಕೂಟ ಮತ್ತು ವ್ಯಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಮಂಡ್ಯದಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರುತ್ತಾರೆ. ಸಾಗರ, ತರೀಕೆರೆಯಲ್ಲೂ ಕುಕೃತ್ಯಗಳ ನಡೆಸಲಾಗಿದೆ. ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಈ ರೀತಿಯ ಮಾನಸಿಕತೆಯ ವ್ಯಕ್ತಿಗಳಿಗೆ ಬಲ ಬರುತ್ತದೆ. ಇದಕ್ಕೆ ಪೂರಕ ಎಂಬಂತೆ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಮತ್ತು ಹುಬ್ಬಳ್ಳಿಯ ಗಲಭೆ ಪ್ರಕರಣಗಳ ದೂರು ರಾಜ್ಯ ಸರ್ಕಾರ ಹಿಂದೆ ಪಡೆಯುತ್ತದೆ ಎಂದು ರಾಘವೇಂದ್ರ ಆರೋಪಿಸಿದರು.

ದೇಶ ವಿರೋಧಿ ಮನಸ್ಥಿತಿಯ ಜನರನ್ನು ಒದ್ದು ಒಳಗೆ ಹಾಕುವ ಬದಲು ಹಿಂದೂ ಕಾರ್ಯಕರ್ತರ ಮೇಲೆ ಕೇಸು ಹಾಕಲಾಗುತ್ತಿದೆ. ಒಂದು ಧರ್ಮವನ್ನು ಓಲೈಸುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಸರ್ಕಾರದಿಂದ ಹೊಸದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈಗ  ಹಿಂದುಳಿದ ವರ್ಗಗಳ ಜಾತಿ ಗಣತಿ ಹೆಸರಲ್ಲಿ ರಾಜ್ಯ ಸರ್ಕಾರವು ಕ್ರೈಸ್ತ ಉಪ್ಪಾರ, ಕ್ರೈಸ್ತ ಭೋವಿ ಎನ್ನುವ ಕಾಲಂ ಸೃಷ್ಟಿಸಿ,  ಹಿಂದುಳಿದ ಜಾತಿಗಳನ್ನು ಒಡೆಯುವ ಹುನ್ನಾರ ನಡೆಸಿದೆ ಎಂದರು.

ADVERTISEMENT

ಬಾನು ಮುಷ್ತಾಕ್‌ಗೆ ಆಹ್ವಾನ ಸಲ್ಲ:

ಚಾಮುಂಡೇಶ್ವರಿ ದೇವಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಲೇಖಕಿ ಬಾನು ಮುಷ್ತಾಕ್‌ ಅವರನ್ನು ನಾಡಹಬ್ಬ ಉದ್ಘಾಟನೆಗೆ ಕರೆದಿರುವುದು ಸರಿಯಲ್ಲ. ಬಾನು ಅವರ ಸಾಹಿತ್ಯ ಸಾಧನೆ ಬಗ್ಗೆ ನನಗೆ ಗೌರವ ಇದೆ. ಆದರೆ ಬಹುಜನರ ಭಾವನೆಗೆ ವಿರುದ್ಧವಾಗಿರುವ ಸರ್ಕಾರದ ನಡೆ ಸರಿಯಲ್ಲ. ಬಾನು ಮುಸ್ತಾಕ್ ಅವರು ನಾಡಹಬ್ಬ ದಸರಾ ಉದ್ಘಾಟನೆ ಮಾಡಬಾರದು. ಕನ್ನಡ ಪರ ಹೋರಾಟಗಾರರು ಇದನ್ನು ಪ್ರಶ್ನಿಸಬೇಕು ಎಂದು ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.

ನವೋದ್ಯಮಗಳಿಗೆ ಪ್ರೋತ್ಸಾಹ ಅನ್ವೇಷಣಾ ಕಾರ್ಯಾಗಾರ ಇಂದು ಶಿವಮೊಗ್ಗ: ಎರಡನೇ ಹಂತದ ನಗರಗಳಲ್ಲಿ ನವೋದ್ಯಮಗಳ (ಸ್ಟಾರ್ಟ್ಅಪ್) ಪ್ರೋತ್ಸಾಹಿಸಲು ಪಿಇಎಸ್‌  ಶಿಕ್ಷಣ ಸಂಸ್ಥೆಯ ಅನ್ವೇಷಣಾ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಆ ಸಂಸ್ಥೆಯ ಅಧ್ಯಕ್ಷರೂ ಆದ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅನ್ವೇಷಣಾ ಸಂಸ್ಥೆ ಮಲೆನಾಡಿನಲ್ಲಿ ವೈಬ್ರೆಂಟ್ ಸ್ಟಾರ್ಟ್ ಅಪ್ ಇಕೊಸಿಸ್ಟಮ್ ನಿರ್ಮಾಣದಲ್ಲಿ ದಾಪುಗಾಲಿಡುತ್ತಿದೆ. ಮಲೆನಾಡು ಪ್ರದೇಶಕ್ಕೆ ಬಲವಾದ ಉದ್ಯಮಶೀಲ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ. ಉದ್ಯಮಶೀಲರಿಗೆ ಸರಿಯಾದ ಮಾರ್ಗದರ್ಶನ ಮಾರುಕಟ್ಟೆ ಪ್ರವೇಶ ಮತ್ತು ಹಣಕಾಸಿನೊಂದಿಗೆ ಮಲೆನಾಡಿನ ನವ ಉದ್ದಿಮೆಗಳನ್ನು ಹೇಗೆ ವಿಶ್ವದರ್ಜೆಯ ನವ ಉದ್ಯಮಗಳನ್ನಾಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದರು. ಸಂಸ್ಥೆಯ ನಿರ್ದೇಶಕ ಸಿ.ಎಂ.ಪಾಟೀಲ್ ಕೃಷಿ ಪ್ರವಾಸೋದ್ಯಮ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಸ್ಟಾರ್ಟ್ಅಪ್‌ಗಳಿಗೆ ಸಂಬಂಧಿಸಿದಂತೆ ಸೆ.13ರ ಮಧ್ಯಾಹ್ನ 3 ಗಂಟೆಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ತಜ್ಞರಾದ ಶಶಿಕುಮಾರ್ ರಫೀಕ್ ಅಸ್ಲಾಂ ರಮಣ ಮಾತನಾಡಲಿದ್ದಾರೆ. ಹೆಚ್ಚಿನ ವಿವರಗಳಿಗೆ ಹರೀಶ್ ಗದಗಿನ್ ಮೊ.: 8147053061ನ್ನು ಸಂಪಕಿರ್ಸಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರೊ.ಆರ್.ನಾಗರಾಜ್ ಅನ್ವೇಷಣಾ ನಿರ್ದೇಶಕಿ ದಿಶಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.