ADVERTISEMENT

ನಗರ ಪಾಲಿಕೆ: ಆಸ್ತಿ ತೆರಿಗೆ ಪಾವತಿಗೆ ಡಿಜಿಟಲ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 16:10 IST
Last Updated 5 ಆಗಸ್ಟ್ 2019, 16:10 IST
ಶಿವಮೊಗ್ಗ ನಗರ ಪಾಲಿಕೆಯಲ್ಲಿ ಸೋಮವಾರ ಆಸ್ತಿ ತೆರಿಗೆ ಪಾವತಿಯ ಡಿಜಿಟಲ್ ಯಂತ್ರಗಳನ್ನು ಶಾಸಕ ಕೆ.ಎಸ್.ಈಶ್ವರಪ್ಪ ಬಿಡುಗಡೆ ಮಾಡಿದರು.
ಶಿವಮೊಗ್ಗ ನಗರ ಪಾಲಿಕೆಯಲ್ಲಿ ಸೋಮವಾರ ಆಸ್ತಿ ತೆರಿಗೆ ಪಾವತಿಯ ಡಿಜಿಟಲ್ ಯಂತ್ರಗಳನ್ನು ಶಾಸಕ ಕೆ.ಎಸ್.ಈಶ್ವರಪ್ಪ ಬಿಡುಗಡೆ ಮಾಡಿದರು.   

ಶಿವಮೊಗ್ಗ: ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತಂದಿರುವ ಕಾರಣ ಆಸ್ತಿ ತೆರಿಗೆ ಪಾವತಿ ಸುಗಮವಾಗಲಿದೆ. ಹಲವು ಗೊಂದಲಗಳು ನಿವಾರಣೆಯಾಗಲಿವೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಡಿಜಿಟಲ್‌ ಯಂತ್ರಗಳನ್ನು (ಎಲೆಕ್ಟ್ರಾನಿಕ್ ಡೆಬಿಟ್ ಕಲೆಕ್ಷನ್) ಕಂದಾಯ ಸಂಗ್ರಹಕಾರರಿಗೆ ಹಸ್ತಾಂತರಿಸಿದ ನಂತರ ಅವರು ಮಾತನಾಡಿದರು.

ತಂತ್ರಜ್ಞಾನದ ಮೂಲಕ ಸಾರ್ವಜನಿಕರು ಸುಲಭವಾಗಿ ತೆರಿಗೆ ಪಾವತಿಸಬಹುದು. ರಾಜ್ಯದ ಕೆಲವೇ ನಗರ ಪಾಲಿಕೆಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಇಡಿಸಿ ಸೌಲಭ್ಯದಿಂದ ಆಸ್ತಿ ತೆರಿಗೆ ಸಂಗ್ರಹವೂ ಸುಲಭವಾಗಲಿದೆ. ತೆರಿಗೆದಾರರು ತಾವು ಇರುವ ಸ್ಥಳದಲ್ಲಿಯೇ ತೆರಿಗೆ ಪಾವತಿಸಬಹುದು. ಅವರು ಪಾವತಿಸಿದ ಮೊತ್ತ ಅದೇ ದಿನ ಖಾತೆಗೆ ಜಮಾ ಆಗಲಿದೆ. ಪಾಲಿಕೆ ತೆರಿಗೆ ಸಂಗ್ರಹದಲ್ಲಿ ಸುಧಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಹೆಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಡಿಜಿಟಲ್ ಯಂತ್ರದ ಸಹಾಯದಿಂದ ಡಿಡಿ, ಚೆಕ್, ಎಟಿಎಂ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಆಸ್ತಿ ತೆರಿಗೆ ಪಡೆಯಬಹುದು ಎಂದರು.

ಕಾರ್ಯವಿಧಾನ: ಇಡಿಸಿ ಮೊಬೈಲ್‌ ಅಪ್ಲಿಕೇಶನ್ ಆಧಾರಿತ ಯಂತ್ರ. ಆಸ್ತಿ ಐಡಿ ಆಧಾರದಲ್ಲಿ ಡಿಮಾಂಡ್ ನೋಟ್ ಸಿದ್ಧಪಡಿಸಿ ಆಸ್ತಿ ತೆರಿಗೆ ಪಾವತಿಸಬಹುದು. ಈ ವ್ಯವಸ್ಥೆಯಲ್ಲಿ ಆಯುಕ್ತರು ತೆರಿಗೆ ಸಂಗ್ರಹದ ರಿಯಲ್ ಟೈಮ್ ಪ್ರಗತಿ ಪರಿಶೀಲಿಸಬಹು. ಈ ವ್ಯವಸ್ಥೆಯನ್ನು ಪಾಲಿಕೆಯ ಆರೋಗ್ಯ ನಿರೀಕ್ಷರಿಗೆ ನೀಡಲಾಗುವುದು. ಪ್ಲಾಸ್ಟಿಕ್ ಬಳಕೆ, ನೈರ್ಮಲ್ಯ ಮತ್ತಿತರ ಪ್ರಕರಣಗಳಲ್ಲಿ ಸ್ಥಳದಲ್ಲಿಯೇ ದಂಡ ವಸೂಲಾತಿ ಮಾಡಲು, ಬಾಡಿಗೆ ಸಂಗ್ರಹ ಕಾರ್ಯಕ್ಕೆ ಬಳಸಲು ನಿರ್ಧರಿಸಲಾಗಿದೆ ಎಂದು ಆಯುಕ್ತೆ ಚಾರುಲತಾ ಸೋಮಲ್ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಮೇಯರ್ ಲತಾ ಗಣೇಶ್, ಉಪ ಮೇಯರ್ ಎಸ್‌.ಎನ್‌.ಚನ್ನಬಸಪ್ಪ, ಬ್ಯಾಂಕ್‌ ಅಧಿಕಾರಿ ಅಶೋಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.