ADVERTISEMENT

ಆರ್ಥಿಕತೆ ಸುಧಾರಣೆ, ಮಹಿಳಾ ಸಬಲೀಕರಣದ ‘ಗ್ಯಾರಂಟಿ’: ಸಚಿವ ಮಧು ಬಂಗಾರಪ್ಪ

ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ ಉದ್ಘಾಟನೆ; ಸಚಿವ ಮಧು ಬಂಗಾರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:39 IST
Last Updated 22 ಜನವರಿ 2026, 2:39 IST
ಶಿವಮೊಗ್ಗದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾಹಿತಿ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು
ಶಿವಮೊಗ್ಗದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾಹಿತಿ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು   

ಶಿವಮೊಗ್ಗ: ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿದೆ. ಮಹಿಳೆಯರ ಸಬಲೀಕರಣದ ಜೊತೆಗೆ ಬಡವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಪರಿಣಾಮಕಾರಿಯಾಗಿ ಆಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಜಿಲ್ಲಾಡಳಿತ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ರೈತರು, ಹಿಂದುಳಿದವರು, ಬಡವರು ಮತ್ತು ಮಹಿಳೆಯರ ಪರವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಬಳಿ ದುಡ್ಡು ಬಂದು ಖರ್ಚೂ ಹೆಚ್ಚಾಗಿದೆ. ಇದರಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯ ಬರುತ್ತಿದೆ ಎಂದರು.

ADVERTISEMENT

ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ದೇವಸ್ಥಾನಗಳ ಆದಾಯ ಹೆಚ್ಚಿದೆ. ಗೃಹಜ್ಯೋತಿ ಹಾಗೂ ವಿದ್ಯಾನಿಧಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಆಗಿರುವ ಅನುಕೂಲಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಆ ನಿಟ್ಟಿನಲ್ಲಿ ಈ ಕಾರ್ಯಾಗಾರ ಉಪಯುಕ್ತವಾಗಿದೆ ಎಂದು ಹೇಳಿದರು.

ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದಡಿ ಸಿದ್ದರಾಮಯ್ಯ ಅವರು ಅಧಿಕಾರ ನಡೆಸಿ ರೈತರಿಗೆ, ಜನರಿಗೆ, ವಿದ್ಯಾರ್ಥಿಗಳಿಗೆ ಅತ್ಯುತ್ತಮ ಯೋಜನೆಗಳನ್ನು ನೀಡಿದ್ದಾರೆ. ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳನ್ನು ಈಡೇರಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಚೇತರಿಕೆ ಕಂಡಿದೆ. ತಲಾದಾಯ ಮತ್ತು ಜಿಎಸ್‌ಟಿಯಲ್ಲಿ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ನಷ್ಟವೇನೂ ಆಗಿಲ್ಲ. ಲಾಭವೇ ಆಗುತ್ತಿದೆ. ಇದೀಗ ಎಲ್ಲ ರಾಜ್ಯಗಳಲ್ಲಿ ನಮ್ಮಂತೆ ಗ್ಯಾರಂಟಿ ಯೋಜನೆಗಳನ್ನು  ನೀಡುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಶೇ 98ರಷ್ಟು ಪ್ರಗತಿಯಲ್ಲಿದ್ದು, ಕೇವಲ ಗ್ಯಾರಂಟಿ ಯೋಜನೆಗಳಲ್ಲದೇ ಇತರೆ ಅಭಿವೃದ್ಧಿ ಕಾಮಗಾರಿಗಳೂ ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗ ಡಾ.ಎಚ್‌.ವಿ.ವಾಸು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಿದೆ. ಜಿಎಸ್‌ಟಿಗೆ ಉತ್ತಮ ಕೊಡುಗೆ ನೀಡಿದೆ. ರಾಜ್ಯದ ತಲಾ ಆದಾಯ ₹2.4 ಲಕ್ಷ ಆಗಿದೆ. ಜಿಎಸ್‌ಟಿ ಬೆಳವಣಿಗೆ ದರ ಸಾಕಷ್ಟು ಹೆಚ್ಚಿದೆ ಎಂದರು.

ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಸ್ವಾಗತಿಸಿದರು. ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿ.ಪಂ. ಸಿಇಒ ಎನ್‌.ಹೇಮಂತ್, ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಮಧು ಪಾಲ್ಗೊಂಡಿದ್ದರು.

ಶಿವಮೊಗ್ಗದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಾಗಾರದಲ್ಲಿ ಪಾಲ್ಗೊಂಡವರ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.