ADVERTISEMENT

ಮೇ 17ರಂದು ಶಿವಮೊಗ್ಗದಲ್ಲಿ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ; ಸಂಸದ ಬಿ.ವೈ.ರಾಘವೇಂದ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 4:14 IST
Last Updated 23 ಫೆಬ್ರುವರಿ 2026, 4:14 IST
ಶಿವಮೊಗ್ಗದಲ್ಲಿ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಆಯೋಜನೆಗೆ ಭಾನುವಾರ ನಡೆದ ವೀರಶೈವ–ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು
ಶಿವಮೊಗ್ಗದಲ್ಲಿ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಆಯೋಜನೆಗೆ ಭಾನುವಾರ ನಡೆದ ವೀರಶೈವ–ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು   

ಶಿವಮೊಗ್ಗ: ಮೇ ತಿಂಗಳ ಬಿಸಿಲು, ಹೊಸ ಮಳೆ, ಗಾಳಿ ಇದ್ದರೂ ಅದಕ್ಕೆ ಜಗ್ಗದೇ ಪಂಚಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಶಿವಮೊಗ್ಗದ ಶತಮಾನದ ಉತ್ಸವದಂತೆ ಸಂಘಟಿಸಲು ವೀರಶೈವ–ಲಿಂಗಾಯತ ಸಮಾಜದ ಎಲ್ಲರೂ ಕೈ ಜೋಡಿಸೋಣ ಎಂದು ಸಂಸದ ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.  

ಮೇ 17ರಂದು ಶಿವಮೊಗ್ಗದಲ್ಲಿ ಆಯೋಜಿಸಿರುವ ಪಂಚಪೀಠದ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ಸಂಘಟನೆಯ ಪೂರ್ವಸಿದ್ಧತೆಗೆ ಭಾನುವಾರ ಇಲ್ಲಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

35 ವರ್ಷಗಳ ನಂತರ ಶಿವಮೊಗ್ಗದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಸುವ ಅವಕಾಶ ದೊರೆತಿದೆ. ಸಭೆಯಲ್ಲಿ ಪಾಲ್ಗೊಂಡಿರುವ ಸಮಾಜದ ಹಿರಿಯರು ಕಾರ್ಯಕ್ರಮದ ಮುಂದಿನ ದೃಷ್ಟಿಕೋನವನ್ನು ಇಲ್ಲಿ ಸ್ಪಷ್ಟವಾಗಿ ಮಂಡಿಸಿದ್ದಾರೆ. ಎಲ್ಲರೂ ಸೇರಿ ಕಾರ್ಯಕ್ರಮದ ರಥ ಎಳೆಯುವ ಕೆಲಸ ಮಾಡಿದಲ್ಲಿ ನೂರಕ್ಕೆ ನೂರು ರಾಜ್ಯದ ಹಿಂದಿನ ಎಲ್ಲ ಅಡ್ಡಪಲ್ಲಕ್ಕಿ ಉತ್ಸವಕ್ಕಿಂತ ಇದು ವೈಭವದ ಕಾರ್ಯಕ್ರಮವಾಗಿ ರೂಪುಗೊಳ್ಳಲಿದೆ ಎಂದರು.

ADVERTISEMENT

ಪಂಚಪೀಠದ ಐವರು ಗುರುಗಳು ಅಂದಿನ ಸಭೆಯಲ್ಲಿ ಇರಲಿದ್ದಾರೆ. ಅವರ ಮನಸ್ಸು ಗೆಲ್ಲುವ ಮೂಲಕ ಇಲ್ಲಿಗೆ ಕರೆತರುವ ಪ್ರಯತ್ನದತ್ತ ಗಮನಹರಿಸೋಣ ಎಂದು ಹೇಳಿದರು.

ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ಇಡೀ ವೀರಶೈವ ಲಿಂಗಾಯತ ಸಮಾಜವನ್ನು ಸಂಘಟಿಸುವ ಮುಖಾಂತರ ಯುವಶಕ್ತಿಗೆ ದಾರಿದೀಪ ಆಗುವ ಕೆಲಸ ಮಾಡೋಣ ಎಂದರು.

ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಉಜ್ಜಯಿನಿ, ಶ್ರೀಶೈಲಪೀಠದ ಶ್ರೀಗಳು ಹೊಸಬರು. ಪರಂಪರೆಯ ಪ್ರಕಾರ ಅವರ ಪುರಪ್ರವೇಶ ಆಗಬೇಕಿದೆ. ಅವರಿಬ್ಬರೊಂದಿಗೆ ಉಳಿದ ಮೂವರನ್ನು ಸೇರಿಸಿ ಅಡ್ಡಪಲ್ಲಕ್ಕಿ ಉತ್ಸವ ನಡೆಸಿ ವೀರಶೈವ ಲಿಂಗಾಯತ ಪರಂಪರೆಯ ಪ್ರದರ್ಶನ ಮಾಡಬೇಕು. ನಮ್ಮ ಶಕ್ತಿ, ಒಗ್ಗಟ್ಟಿನ ಪ್ರದರ್ಶನಕ್ಕೆ ಇದು ವೇದಿಕೆ ಆಗಬೇಕು ಎಂದು ಹೇಳಿದರು.

ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಮಾತನಾಡಿ, ಕೇದಾರ‌ ಶ್ರೀಗಳು ಬರುವುದಿಲ್ಲವೆಂದು‌ ಕೆಲವರು ಗುಸುಗುಸು ಮಾತನಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಈ ರೀತಿ ಮಾತನಾಡುವುದು ನಿಲ್ಲಿಸಬೇಕು. ಯಡಿಯೂರಪ್ಪ ಅವರಂತಹ ಹಿರಿಯರು ಹೋಗಿ ಕರೆದರೆ ಶ್ರೀಗಳು ಬರುವುದಿಲ್ಲ ಎನ್ನುವುದಿಲ್ಲ. ಕೇದಾರನಾಥನ ಪ್ರೇರಣೆಯಾದರೆ ಬರುವುದಾಗಿ ಈ ಹಿಂದೆ ಕರೆದಾಗ ಶ್ರೀಗಳು ಹೇಳಿದ್ದಾರೆ. ಹೀಗಾಗಿ ಉತ್ಸವಕ್ಕೆ ಶ್ರೀಗಳು ಬರುತ್ತಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಸಂಘಟನೆಯ ರೂಪುರೇಷೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸಭೆಯ ಮುಂದಿಟ್ಟರು.

ಸಭೆಯಲ್ಲಿ ಯಡಿಯೂರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಸಭೆಯ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್‌.ಪಿ.ದಿನೇಶ್, ಮುಖಂಡ ಬಳ್ಳೇಕೆರೆ ಸಂತೋಷ್ ಪಾಲ್ಗೊಂಡಿದ್ದರು.

ಪುರಿಯ ಜಗನ್ನಾಥನ ರಥವನ್ನು ಎಲ್ಲರೂ ಎಳೆದಾಗ ಆಗುವ ಪುಣ್ಯ ಸಂಪಾದನೆಯ ರೀತಿಯೇ ಪಂಚ ಪೀಠಾಧೀಶರ ಉತ್ಸವವನ್ನು ಯಶಸ್ವಿಗೊಳಿಸುವ ಕೆಲಸ ಎಲ್ಲರೂ ಸೇರಿ ಮಾಡಿ ಗುರುಗಳ ಆಶೀರ್ವಾದ ಪಡೆಯೋಣ. 1993 ನಂತರ ಈ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ ಇದು ಮಹತ್ವದ್ದು ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.