ADVERTISEMENT

ಜನಸಂಖ್ಯೆ ಹೆಚ್ಚಳಕ್ಕೆ ಮಿತಿಯ ಚೌಕಟ್ಟು

ಇಂದು ವಿಶ್ವ ಜನಸಂಖ್ಯಾ ದಿನಾಚರಣೆ ಸಮಯದಲ್ಲಿ ಜಿಲ್ಲೆಯ ಜನ ಸಂಖ್ಯೆ 18,34,743

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 14:40 IST
Last Updated 10 ಜುಲೈ 2018, 14:40 IST

ಶಿವಮೊಗ್ಗ:ಜಿಲ್ಲೆಯ ಜನ ಸಂಖ್ಯೆ 2021ರ ವೇಳೆಗೆ 18,71,174 ಇರುತ್ತದೆ ಎಂದು ಜಿಲ್ಲಾ ಸಾಂಖ್ಯಿಕ ಇಲಾಖೆ ಅಂದಾಜು ಮಾಡಿದೆ. 2001ರಿಂದ 2011ರವರೆಗಿನ ಜಿಲ್ಲೆಯ ಜನಸಂಖ್ಯಾ ಬೆಳವಣಿಗೆಗೆ ಹೋಲಿಸಿದರೆ, 2011–2021ರ ಬೆಳವಣಿಗೆ ದರ ಸಾಕಷ್ಟು ತಗ್ಗಿದೆ. ಬಹುತೇಕ ಕುಟುಂಬಗಳು ಒಂದೇ ಮಗು ಪರಿಕಲ್ಪನೆಗೆ ಒಲವು ತೋರುತ್ತಿರುವುದು ಜನಸಂಖ್ಯೆಯ ನಾಗಲೋಟಕ್ಕೆ ಕಡಿವಾಣ ಬೀಳಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಿಲಾಗಿದೆ.

1991ರಿಂದ 2001ರವರೆಗೆ ಜಿಲ್ಲೆಯ ಜನ ಸಂಖ್ಯೆ ಹೆಚ್ಚಳ ಪ್ರಮಾಣ ಶೇ 13.10 ಇತ್ತು. 2001ರಲ್ಲಿ 16,42,545 ಇದ್ದ ಜನ ಸಂಖ್ಯೆ 2011ರ ವೇಳೆಗೆ 17,52,753 ತಲುಪಿತ್ತು. ಅಂದರೆ ಶೇ 6.71ರಷ್ಟು ಹೆಚ್ಚಳವಾಗಿತ್ತು. ಸಾಂಖ್ಯಿಕ ಇಲಾಖೆಯ ಮಾಹಿತಿ ಪ್ರಕಾರ 2018ರಲ್ಲಿ 18,34,743 ಇದೆ. ಇದು 2021ರ ವೇಳಗೆ 18,71,174 ಆಗುತ್ತದೆ. ಅಂದರೆ ಇನ್ನೂ ಮೂರು ವರ್ಷಗಳಲ್ಲಿ ಹೆಚ್ಚಳವಾಗುವ ಜನಸಂಖ್ಯೆ ಕೇವಲ 36,431 ಹೆಚ್ಚಳವಾಗುತ್ತದೆ.

2015ರಿಂದ 2018ರವರೆಗೆ ಜಿಲ್ಲೆಯ 7 ತಾಲ್ಲೂಕುಗಳ ಜನಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಏರಿಕೆಯಾಗಿದೆ. 2018ರಲ್ಲಿ 5,22,841 ಇರುವ ಶಿವಮೊಗ್ಗ ತಾಲ್ಲೂಕಿನ ಜನಸಂಖ್ಯೆ 2021ರ ವೇಳೆಗೆ 5,34,819ರಷ್ಟಾಗುತ್ತದೆ. ಭದ್ರಾವತಿ ತಾಲ್ಲೂಕು 3,49,287ರಿಂದ 3,56,558, ಶಿಕಾರಿಪುರ 2, 44,046ರಿಂದ 2,48,509, ಸಾಗರ 2,11, 662ರಿಂದ 2,15, 769, ಸೊರಬ 2,05,220ರಿಂದ 2,08, 595, ಹೊಸನಗರ 1,20, 810ರಿಂದ 1,22, 791 ಹಾಗೂ ತೀರ್ಥಹಳ್ಳಿ ತಾಲ್ಲೂಕು 1, 45, 232ರಿಂದ 1,47, 702ಕ್ಕೆ ಹೆಚ್ಚಳವಾಗಿದೆ.

2021ರ ವೇಳೆಗೆ ಶಿವಮೊಗ್ಗ ತಾಲ್ಲೂಕಿನ ಜನಸಂಖ್ಯೆ 5, 47, 097, ಭದ್ರಾವತಿ 3,63, 997, ಶಿಕಾರಿಪುರ 2,53,063, ಸಾಗರ -2,19, 967, ಸೊರಬ 2,12, 027, ಹೊಸನಗರ 1,24, 806 ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಜನಸಂಖ್ಯೆ 1,50, 217 ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ.

‘ಹಿಂದಿನ ಸಮೀಕ್ಷೆಗಳ ಆಧಾರ ಹಾಗೂ ಪ್ರತಿ ವರ್ಷದ ಜನನ, ಮರಣಗಳ ಅಂಕಿ, ಸಂಖ್ಯೆಯ ಆಧಾರದಲ್ಲಿ ಜನ ಸಂಖ್ಯೆ ಏರಿಕೆಯ ಖಚಿತ ಲೆಕ್ಕಾಚಾರ ಮಾಡಲಾಗುತ್ತದೆ. 2001 ಮತ್ತು 2011ರ ಮಧ್ಯೆ ಇದೇ ರೀತಿ ಲೆಕ್ಕ ಹಾಕಲಾಗಿತ್ತು. ಇಲಾಖೆಯ ಅಂದಾಜು 2011ರ ಗಣತಿಗೆ ಸಾಮ್ಯವಾಗಿತ್ತು. ಈಗಲೂ ಅದೇ ಮಾರ್ಗ ಅನುಸರಿಸಲಾಗಿದೆ’ ಎನ್ನುತ್ತಾರೆ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಬ್ರಿಜೆಟ್ ವರ್ಗಿಸ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.