ADVERTISEMENT

ಕಿಮ್ಮನೆ ಪರ ಕಾರ್ಯಕರ್ತರ ಬ್ಯಾಟಿಂಗ್‌

ಕಿಮ್ಮನೆ, ಮಂಜುನಾಥಗೌಡ ನಡುವೆ ಮುಸುಕಿನ ಗುದ್ದಾಟ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 4:49 IST
Last Updated 13 ಏಪ್ರಿಲ್ 2021, 4:49 IST
ತೀರ್ಥಹಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಗೆ ಸೋಮವಾರ ವೀಕ್ಷಕ ಶಫಿ ಉಲ್ಲಾ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿದರು
ತೀರ್ಥಹಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಗೆ ಸೋಮವಾರ ವೀಕ್ಷಕ ಶಫಿ ಉಲ್ಲಾ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿದರು   

ತೀರ್ಥಹಳ್ಳಿ: ‘ಕಿಮ್ಮನೆ ರತ್ನಾಕರ ಅವರನ್ನು ಪಕ್ಷದಲ್ಲಿ ಕಡೆಗಣಿಸಿದರೆ ಪರಿಣಾಮ ಸರಿ ಇರಲ್ಲ. ಕಿಮ್ಮನೆ ಅವರ ಗಮನಕ್ಕೆ ತರದೇ ಪಕ್ಷದ ಯಾವುದೇ ಚಟುವಟಿಕೆಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಅವಕಾಶ ನೀಡುವುದಿಲ್ಲ’ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಗರಂ ಆದರು.

ಸೋಮವಾರ ಪಟ್ಟಣದ ಸೊಪ್ಪುಗುಡ್ಡೆಯಲ್ಲಿನ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾ ವೀಕ್ಷಕ ಶಫಿ ಉಲ್ಲಾ ಭೇಟಿ ನೀಡಿದಾಗ ಕಾರ್ಯಕರ್ತರು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಪಟ್ಟಣ ಪಂಚಾಯಿತಿಗೆ ಏ. 27ರಂದು ಚುನಾವಣೆ ನಡೆಯಲಿದ್ದು, ತಮ್ಮ ಗಮನಕ್ಕೆ ತರದೇ ಅಭ್ಯರ್ಥಿಗಳ ಆಯ್ಕೆಗಾಗಿ ಸಮಿತಿ ರಚಿಸಿರುವುದಕ್ಕೆ ಕಿಮ್ಮನೆ ಅವರು ತೀವ್ರ ಅಸಮಾಧಾನಗೊಂಡಿದ್ದರು. ಆಯ್ಕೆ ಸಮಿತಿಯಲ್ಲಿ ಮಂಜುನಾಥಗೌಡ ಅವರಿಗೆ ಸ್ಥಾನ ನೀಡಲಾಗಿತ್ತು. ಇದು ಪಕ್ಷಕ್ಕೆ ಇತ್ತೀಚೆಗೆ ಸೇರಿದ ಆರ್.ಎಂ.ಮಂಜುನಾಥಗೌಡ ಹಾಗೂ ಕಿಮ್ಮನೆ ರತ್ನಾಕರ ಅವರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು.

ADVERTISEMENT

ಆಯ್ಕೆ ಸಮಿತಿಯನ್ನು ರದ್ದುಪಡಿಸಬೇಕು. ಅಭ್ಯರ್ಥಿಗಳಿಗೆ ‘ಬಿ’ ಫಾರಂ ನೀಡುವ ಅಧಿಕಾರವನ್ನು ಕಿಮ್ಮನೆ ಅವರಿಗೇ ನೀಡಬೇಕು ಎಂದು ಕಾರ್ಯಕರ್ತರು ಪಟ್ಟುಹಿಡಿದರು.

ಪಕ್ಷ ಸಂಘಟನೆಗೆ ದುಡಿದ ಕಾರ್ಯಕರ್ತರನ್ನು ಕಡೆಗಣಿಸಲು ಸಾಧ್ಯವಿಲ್ಲ. ಮಂಜುನಾಥಗೌಡ ಅವರು ಕಾಂಗ್ರೆಸ್ ಸೇರಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಅವರನ್ನು ಪಕ್ಷ ಸ್ವಾಗತಿಸುತ್ತದೆ. ಚುನಾವಣೆಯಲ್ಲಿ ಗುಂಪುಗಾರಿಕೆ ನಡೆಸದೇ ಬಿಜೆಪಿ ಸೋಲಿಸಲು ಎಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕು. ಇದಕ್ಕೆ ಕಾರ್ಯಕರ್ತರು ಸಿದ್ಧರಿದ್ದಾರೆ. ಇದನ್ನು ವರಿಷ್ಠರು ಅರಿಯಬೇಕು ಎಂದು ಕಾರ್ಯಕರ್ತರು ಹೇಳಿದರು.

ಕಿಮ್ಮನೆ ಗಮನಕ್ಕೆ ತರದೇ ಆಯ್ಕೆ ಸಮಿತಿ ರಚಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಆಯ್ಕೆ ಸಮಿತಿಯನ್ನು ರದ್ದುಗೊಳಿಸಬೇಕು. ತೀರ್ಥಹಳ್ಳಿ ವಿಧಾನಸಭಾ ವ್ಯಾಪ್ತಿಯಲ್ಲಿ ನಡೆಯುವ ಪಕ್ಷದ ಚಟುವಟಿಕೆಯನ್ನು ಕಿಮ್ಮನೆ ಗಮನಕ್ಕೆ ತರಬೇಕು. ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮಂಜುನಾಥಗೌಡ ಅವರೊಂದಿಗೆ ಪಕ್ಷ ಸೇರಿದವರು ಪಕ್ಷದ ಕಾರ್ಯಕರ್ತರೊಂದಿಗೆ ಒಗ್ಗೂಡಿ ಕಾಂಗ್ರೆಸ್‌ ಗೆಲ್ಲಿಸುವ ದೃಢ ನಿರ್ಧಾರ ತಗೆದುಕೊಳ್ಳಬೇಕು ಎಂದು ಸಭೆ ನಿರ್ಧರಿಸಿತು.

ಸಭೆಯಲ್ಲಿ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರ್ ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ನಗರ ಯುವ ಘಟಕದ ಅಧ್ಯಕ್ಷ ಅಮರನಾಥಶೆಟ್ಟಿ, ಗ್ರಾಮಾಂತರ ಘಟಕದ ಅಧ್ಯಕ್ಷ ರಾಘವೇಂದ್ರ ಪೊಟ್ಟೋಡ್ಲು, ಕಾರ್ಯದರ್ಶಿ ಸುಭಾಷ್ ಕುಲಾಲ್, ಪ್ರಮುಖರಾದ ಹಾರೋಗೊಳಿಗೆ ಪದ್ಮನಾಭ್, ಕೆಳಕರೆ ದಿವಾಕರ್‌, ರಮೇಶ್‌ ಶೆಟ್ಟಿ ಕುಡುಮಲ್ಲಿಗೆ, ಕಡ್ತೂರ್ ದಿನೇಶ್, ಅಮ್ರಪಾಲಿ ಸುರೇಶ್, ಪೂರ್ಣೇಶ್ ಕೆಳಕೆರೆ, ರಾಘವೇಂದ್ರ ಶೆಟ್ಟಿ, ದತ್ತಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.