ಶಿವಮೊಗ್ಗ: ಮಹಿಳೆಯರು ಕೀಳರಿಮೆಯಿಂದ ಹೊರ ಬಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಾ ಈ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಸಲಹೆ ನೀಡಿದರು.
ಇಲ್ಲಿನ ಆದಿಚುಂಚನಗಿರಿ ಸಭಾ ಭವನದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಮಹಿಳಾ ವಿಭಾಗದಿಂದ ಹಮ್ಮಿಕೊಂಡಿದ್ದ ಸಸ್ಯಾಹಾರಿ ಖಾದ್ಯಗಳ ತಯಾರಿಕೆ, ರಸಪ್ರಶ್ನೆ ಸ್ಪರ್ಧೆ ಹಾಗೂ ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಹಲ್ಗಾಮ್ ನಲ್ಲಿ 26 ಜನ ಪ್ರವಾಸಿಗರನ್ನು ಗುಂಡು ಹಾರಿಸಿ ಕೊಂದುಹಾಕಿದ ಭಯೋತ್ಪಾದಕರ ಹೊಡೆದುಹಾಕಿ, ಈ ರಾಷ್ಟ್ರ ಮಹಿಳೆಯರ ಸಿಂಧೂರಕ್ಕೆ ಎಷ್ಟು ಬೆಲೆ ಕೊಡುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಜಗತ್ತಿಗೆ ಪರಿಚಯಿಸಿದೆ. ದೇಶಕ್ಕೆ ನಮ್ಮ ಯೋಗದಾನ ಏನು ಎಂದು ಪ್ರತಿ ಹೆಣ್ಣು ಮಕ್ಕಳು ಯೋಚಿಸುವ ಕಾಲ ಈಗ ಬಂದಿದೆ ಎಂದರು.
ಎಲ್ಲಾ ರಂಗಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದು, ಅವಕಾಶ ಸಿಕ್ಕರೆ ಏನು ಬೇಕಾದರೂ ಸಾಧನೆ ಮಾಡುವ ಶಕ್ತಿ ಹೊಂದಿದ್ದಾರೆ. ಗೃಹಮಂತ್ರಿ ಆಗಿದ್ದಾಗ ಮಹಿಳಾ ಕಾನ್‌ಸ್ಟೆಬಲ್‌ನಿಂದ ಹಿಡಿದು, ಐಪಿಎಸ್ ಅಧಿಕಾರಿಯವರೆಗೆ ಹೆಣ್ಣುಮಕ್ಕಳ ಕಾರ್ಯಕ್ಷಮತೆ ನೋಡಿದ್ದೇನೆ. ಅವರು ಮಾನಸಿಕವಾಗಿ ತಯಾರಿ ನಡೆಸಿದರೆ ಏನೂ ಬೇಕಾದರೂ ಸಾಧಿಸಬಲ್ಲರು ಎಂದರು.
ಇತ್ತೀಚೆಗೆ ಡೈವೋರ್ಸ್ ಎಂಬ ಸಾಮಾಜಿಕ ವಿಪ್ಲವ ಹೆಚ್ದುತ್ತಿದೆ. ಇದರಿಂದ ಭಾರತೀಯ ಕುಟುಂಬ ವ್ಯವಸ್ಥೆಯ ಅಡಿಪಾಯ ಕುಸಿಯುತ್ತಿದೆ. ರೈತರನ್ನು ಹೆಣ್ಣು ಮಕ್ಕಳು ಮದುವೆಯಾಗುತ್ತಿಲ್ಲ. ಇದು ರೈತಾಪಿ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಕುಟುಂಬ ವ್ಯವಸ್ಥೆಯ ಬಗ್ಗೆ ಚಿಂತನೆ ಮಾಡುವ ಕಾಲ ಬಂದಿದೆ. ಮಹಿಳಾ ಸಂಘಟನೆಗಳು ಈ ಬಗ್ಗೆ ಕಾರ್ಯಾಗಾರ ಏರ್ಪಡಿಸಿ ನಮ್ಮ ಸಂಸ್ಕಾರ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ರಾಜ್ಯ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಶಾಂತಾ ಸುರೇಂದ್ರ ಮಾತನಾಡಿ, ಕಳೆದರಡು ವರ್ಷಗಳಲ್ಲಿ 48 ಕಾರ್ಯಕ್ರಮಗಳನ್ನು ವೇದಿಕೆ ಹಮ್ಮಿಕೊಂಡಿದೆ. ನಮ್ಮ ಸಂಘ ಆದಿಚುಂಚನಗಿರಿ ಶ್ರೀಗಳ ಆಶೀರ್ವಾದದಿಂದ ಸಂಘಟನೆಯನ್ನು ಮೂಲಮಂತ್ರವನ್ನಾಗಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಲವಾಗಿ ಬೆಳೆಯುತ್ತಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ಆದಿ ಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ವಹಿಸಿದ್ದರು. ಅತಿಥಿಗಳಾಗಿ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಸಂಘದ ಅಧ್ಯಕ್ಷೆ ಪ್ರತಿಮಾ ಡಾಕಪ್ಪಗೌಡ, ಯುವ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಘುರಾಜ್, ರಂಗೇಗೌಡ್ರು, ಆರ್. ವಿಜಯಕುಮಾರ್, ಎಚ್. ರಾಮಚಂದ್ರ, ಎಂ. ಪ್ರಕಾಶ್, ರಮೇಶ್ ಹೆಗ್ಡೆ, ಶಿವರಾಜ್, ಅಶೋಕ್, ಸ್ವರ್ಣಾ ರಮೇಶ್, ಆರತಿ ಪ್ರಕಾಶ್, ಮಮತಾ ದಿವಾಕರ್, ರೇವತಿ, ಪ್ರಫುಲ್ಲಾ, ಚಂದ್ರಕಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.