ಪಿತೃಪಕ್ಷ ಅಮಾವಾಸ್ಯೆ ಆಚರಣೆ
ಶಿವಮೊಗ್ಗ: ಪಿತೃಪಕ್ಷ ಅಮಾವಾಸ್ಯೆ ಆಚರಣೆ ಶಿವಮೊಗ್ಗ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ನಡೆಯಿತು. ಅಮಾವಾಸ್ಯೆಯ ನಂತರದ ನವರಾತ್ರಿಯ ಸಂಭ್ರಮಕ್ಕೆ ಮುನ್ನುಡಿ ಬರೆಯಲಾಯಿತು.
ಶಿವಮೊಗ್ಗದ ಕೋಟೆ ಪ್ರದೇಶದ ತುಂಗಾ ನದಿಯ ಭೀಮನ ಮಡು ದಂಡೆಯಲ್ಲಿ ಬೆಳಿಗ್ಗೆಯಿಂದಲೇ ಪಿತೃಗಳಿಗೆ ತರ್ಪಣ ಬಿಡುವ ಧಾರ್ಮಿಕ ಕಾರ್ಯ ನಡೆಯಿತು.
ನದಿ ದಂಡೆಯ ತಾಲ್ಲೂಕು ಬ್ರಾಹ್ಮಣ ಸಂಘದ ಸಭಾಂಗಣ ಹಾಗೂ ಗುರು ಕರಿಬಸವೇಶ್ವರ ಭವನದಲ್ಲಿ ಪಿತೃಪಕ್ಷದ ಅಂಗವಾಗಿ ವಿಶೇಷ ಆಚರಣೆಗಳು ನಡೆದವು.
ಕುಟುಂಬ ಸಮೇತರಾಗಿ ಪಿತೃಪಕ್ಷ ಆಚರಣೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ಅರ್ಚಕರು ಹಾಗೂ ಪೂಜಾರರ ಸಮ್ಮುಖದಲ್ಲಿ ಅವರ ಮಾರ್ಗದರ್ಶನದಂತೆ ಪೂಜಾ ವಿಧಿವಿಧಾನ ನೆರವೇರಿಸಿದರು.
ಹಿರಿಯರಿಗೆ ಇಷ್ಟವಾದ ತಿಂಡಿ, ಭಕ್ಷ್ಯಭೋಜನಗಳನ್ನು ಸಿದ್ಧಪಡಿಸಿಕೊಂಡು ತಂದು ಬಾಳೆ ಎಲೆಯಲ್ಲಿ ಎಡೆ ಇಟ್ಟು ನದಿ ದಂಡೆಯಲ್ಲಿ ಪಿತೃಗಳಿಗೆ ಸಮರ್ಪಣೆ ಮಾಡಿ ಹಿರಿಯರನ್ನು ಸ್ಮರಿಸಿದರು.ನಂತರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ತೀರ್ಥಹಳ್ಳಿಯ ತುಂಗಾ ನದಿ ದಂಡೆ, ಸಾಗರದಲ್ಲಿ ವರದೆಯ ಒಡಲು, ಕೂಡಲಿ ಬಳಿಯ ತುಂಗ-ಭದ್ರಾ ಸಂಗಮ ಸ್ಥಳ, ಹೊಸನಗರದಲ್ಲಿ ಶರಾವತಿ ಹಿನ್ನೀರು ಪ್ರದೇಶದಲ್ಲಿ ಪಿತೃಗಳಿಗೆ ತರ್ಪಣ ಬಿಟ್ಡು ಹಿರಿಯರ ಸ್ಮರಣೆ ಮೂಲಕ ಪಕ್ಷಾಚರಣೆ ಮಾಡಿ ನಂತರ ಸಾಮೂಹಿಕ ಭೋಜನ ಮಾಡಲಾಯಿತು.
ನೀರಲ್ಲಿ ಮುಳುಗಿ ನಾಣ್ಯ ಹೆಕ್ಕಲು ಪೈಪೋಟಿ..!
ಶಿವಮೊಗ್ಗದ ತುಂಗಾ ನದಿ ದಂಡೆಯಲ್ಲಿ ಪಿತೃಪಕ್ಷ ಆಚರಣೆ ಪೂಜೆಯ ವೇಳೆ ನದಿಗೆ ಹಾಕುತ್ತಿದ್ದ ನಾಣ್ಯ ಹೆಕ್ಕಲು ಪೈಪೋಟಿ ನಡೆದಿತ್ತು.
ನದಿಯ ನೀರಲ್ಲಿ ಮುಳುಗಿ ಮಣ್ಣು, ಮರಳು ಮೇಲೆ ತಂದು ಅದರಲ್ಲಿ ನಾಣ್ಯಗಳನ್ನು ಹುಡುಕಿ ಹೆಕ್ಕುವ ಅಪಾಯಕಾರಿ ಕಾರ್ಯದಲ್ಲಿ ಕೆಲವರು ನಿರತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.