ADVERTISEMENT

‘ಜನಪರ ಚಳವಳಿಗಳು ಯುವ ಜನಕ್ಕೆ ಸ್ಪೂರ್ತಿಯಾಗಬೇಕು’: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 5:54 IST
Last Updated 4 ಆಗಸ್ಟ್ 2025, 5:54 IST
ಸಾಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ರೈತನ ಕಷ್ಟವನ್ನು ರೈತನೇ ಬಲ್ಲ’ ಕೃತಿ ಬಿಡುಗಡೆಗೊಂಡಿತು
ಸಾಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ರೈತನ ಕಷ್ಟವನ್ನು ರೈತನೇ ಬಲ್ಲ’ ಕೃತಿ ಬಿಡುಗಡೆಗೊಂಡಿತು   

ಸಾಗರ: ‘ನಾಡಿನಲ್ಲಿ ನಡೆದ ಹಲವು ಜನಪರ ಚಳವಳಿಗಳಿಂದ ಯುವ ಜನ ಸ್ಪೂರ್ತಿ ಪಡೆಯಬೇಕು’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಇಲ್ಲಿನ ಬಸವನಹೊಳೆ ಸಮೀಪದ ಆರಾಧ್ಯ ಹೋಟೆಲ್ ಸಭಾಂಗಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಉತ್ತರಾಧಿಕಾರಿಗಳ ಸಂಘಟನೆ, ಭೂಮಣ್ಣಿ ಪಾರ್ಕ್ ಟ್ರಸ್ಟ್ ಭಾನುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್. ಗಣಪತಿಯಪ್ಪ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ‘ರೈತನ ಕಷ್ಟವನ್ನು ರೈತನೇ ಬಲ್ಲ’ ಮರು ಮುದ್ರಿತ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಐತಿಹಾಸಿಕ ಕಾಗೋಡು ಸತ್ಯಾಗ್ರಹ ನಡೆದ ನೆಲ ಇದಾಗಿದೆ. ಎಚ್. ಗಣಪತಿಯಪ್ಪ ಅವರು 50ರ ದಶಕದಲ್ಲಿ ಈ ಸತ್ಯಾಗ್ರಹವನ್ನು ಆರಂಭಿಸದಿದ್ದರೆ 70ರ ದಶಕದಲ್ಲಿ ದೇವರಾಜ ಅರಸು ಅವರು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಹೋರಾಟಗಳ ಮಹತ್ವದ ಅರಿವು ಈ ತಲೆಮಾರಿಗೆ ಬೇಕಾಗಿದೆ ಎಂದರು.

ADVERTISEMENT

ಕೃಷಿ ಕ್ಷೇತ್ರ ಇಂದು ಹಲವು ರೀತಿಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಭೂಮಿಯ ಹಕ್ಕು ದೊರಕಿದ್ದರೂ ಕೃಷಿ ಲಾಭದಾಯಕವಲ್ಲ ಎಂಬ ಭಾವನೆ ಯುವ ಜನರಲ್ಲಿ ನೆಲೆಯೂರಿದೆ. ಕೃಷಿ ಭೂಮಿಯನ್ನು ವಾಣಿಜ್ಯ ಭೂಮಿಯಾಗಿ ಪರಿವರ್ತಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಕೃಷಿಯ ಉಳಿವಿನ ಕುರಿತು ಗಂಭೀರವಾಗಿ ಚಿಂತಿಸಬೇಕಾದ ಕಾಲ ಇದಾಗಿದೆ ಎಂದು ಹೇಳಿದರು.

ಕಾಗೋಡು ಸತ್ಯಾಗ್ರಹ ಯಾವುದೆ ಒಂದು ಕುಟುಂಬ ಅಥವಾ ವ್ಯಕ್ತಿಯ ವಿರುದ್ಧ ನಡೆದ ಹೋರಾಟವಲ್ಲ. ಇದು ಭೂಮಿಯ ಹಕ್ಕಿಗಾಗಿ ನಡೆದ ಹೋರಾಟ. ಅನೇಕ ಭೂ ಮಾಲಿಕರು ಈ ಸತ್ಯಾಗ್ರಹವನ್ನು ಸ್ವಾಗತಿಸಿದ್ದರು ಮತ್ತು ಸ್ವಯಂ ಪ್ರೇರಣೆಯಿಂದ ಗೇಣಿದಾರರಿಗೆ ಭೂಮಿಯನ್ನು ಬಿಟ್ಟು ಕೊಟ್ಟ ಉದಾಹರಣೆಗಳು ಇವೆ ಎಂದು ಮಲ್ಲವ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಕೆ.ಜಿ. ಜಗದೀಶ್ ಒಡೆಯರ್ ತಿಳಿಸಿದರು.

ಶ್ರೀಧರ ಸೇವಾ ಮಹಾ ಮಂಡಲದ ಅಧ್ಯಕ್ಷ ಎಂ.ಜಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗೋಪಾಲಶೆಟ್ಟಿ, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಭೂಮಣ್ಣಿ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಗಣಪತಿಯಪ್ಪ ಇದ್ದರು.

ರೇಣುಕಾ ಮೂರ್ತಿ ಪ್ರಾರ್ಥಿಸಿದರು. ಪ್ರಜ್ವಲ್ ಸ್ವಾಗತಿಸಿದರು. ಅನ್ನಪೂರ್ಣ ನಿರೂಪಿಸಿದರು. ಕರ್ನಾಟಕ ಜಾನಪದ ಪರಿಷತ್ ತಂಡದ ಸದಸ್ಯರಿಂದ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.