ಶಿವಮೊಗ್ಗ: ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಶಿವಮೊಗ್ಗ ಜಿಲ್ಲೆಯು ಜಾಗತಿಕವಾಗಿ ಗುರುತಿಸಿಕೊಂಡಿದೆ. ಅದರ ಭಾಗವಾಗಿ ₹110 ಕೋಟಿ ವೆಚ್ಚದಲ್ಲಿ ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಿಸಿದ್ದು, 2026ರ ಫೆಬ್ರುವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಲ್ಲಿನ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ, ಸುವರ್ಣ ದಾಂಪತ್ಯ ಸನ್ಮಾನ, ವಿದ್ಯಾನಿಧಿ ವಿತರಣೆ ಹಾಗೂ ಸಾಧಕ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
‘ಕೋಚಿಂಗ್ ಡಿಪೋ ಲೋಕಾರ್ಪಣೆಗೊಳ್ಳುತ್ತಿದ್ದಂತೆಯೇ ವಂದೇ ಭಾರತ್ ಸೇರಿದಂತೆ 10 ರಾಜ್ಯಗಳಿಗೆ ಇಲ್ಲಿಂದಲೇ ರೈಲು ಓಡಿಸಲು ಸಿದ್ಧತೆ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಈಗ 360 ಡಿಗ್ರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸೋಣ’ ಎಂದರು.
ಸಮುದಾಯದ ಬೆಂಬಲ ಇದ್ದರೆ ಮಕ್ಕಳಿಗೆ ಭದ್ರತೆಯ ಭಾವ ಇರುತ್ತದೆ. ಆ ನಿಟ್ಟಿನಲ್ಲಿ ವಿಪ್ರ ಸಮಾಜ ಸಾಧಕ ವಿದ್ಯಾರ್ಥಿಗಳಿಗೆ ಬೆನ್ನುತಟ್ಟುವ ಹಾಗೂ ವಿದ್ಯಾನಿಧಿ ಮೂಲಕ ನೆರವು ನೀಡಲು ಮುಂದಾಗಿರುವುದು ಶ್ಲಾಘನೀಯ ಸಂಗತಿ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ (ಎಐ) ಬಳಕೆ ಅನುಕೂಲದ ಜೊತೆಗೆ ಉದ್ಯೋಗ ಕಸಿದುಕೊಳ್ಳುವ ಆತಂಕವನ್ನೂ ಮೂಡಿಸಿದೆ. ಟಿಸಿಎಸ್ ಕಂಪನಿಯವರು 12,000 ನೌಕರರನ್ನು ಉದ್ಯೋಗದಿಂದ ಕೈ ಬಿಡುತ್ತಿದ್ದಾರೆ. ಅದು ಸರಿಯಲ್ಲ. ಜಾಗತೀಕರಣದ ಈ ಹೊತ್ತಿನಲ್ಲಿ ಎಲ್ಲರೂ ಓಡುತ್ತಿದ್ದೇವೆ. ಆ ಓಟ ಸಂಸ್ಕಾರಯುತವಾಗಿರಬೇಕು. ಇಂದು ಶಿವಮೊಗ್ಗ ಕೂಡ ಶಿಕ್ಷಣ, ಆರೋಗ್ಯದ ಹಬ್ ಆಗಿ ಬದಲಾಗಿದೆ. ಇಲ್ಲಿ ಅವಕಾಶಗಳ ಬಾಗಿಲು ಹೆಚ್ಚಾಗಿವೆ ಎಂದರು.
ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಸಂಘಟನೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಆದರೆ ಸಂಘಟನೆಯಲ್ಲಿ ಅಹಂ ಸರಿಯಲ್ಲ. ಒಗ್ಗರಣೆ ಹಾಕಿದಂತೆ ಎಲ್ಲ ಸಂಗತಿಗಳೂ ಹದವಾಗಿ ಬೆರೆಯಬೇಕು. ಆಗ ಮಾತ್ರ ಸಂಘಟನೆ ಯಶಸ್ವಿಯಾಗುತ್ತದೆ ಎಂದರು.
50 ವರ್ಷ ದಾಂಪತ್ಯ ಬದುಕು ಪೂರ್ಣಗೊಳಿಸಿದವರಿಗೆ ಸನ್ಮಾನ ಬಹಳ ಒಳ್ಳೆಯ ಕಾರ್ಯ. ಶೇ 30ರಿಂದ 35ರಷ್ಟು ವಿವಾಹಗಳು ವಿಚ್ಛೇದನದತ್ತ ಸಾಗುತ್ತಿರುವ, ಶೇ 15ರಿಂದ 20 ಮಂದಿ ಮದುವೆ ಆಗಲು ಇಷ್ಟವಿಲ್ಲವೆಂಬ ಪರಿಸ್ಥಿತಿ ನಿರ್ಮಾಣವಾಗಿರುವ ಈ ಹೊತ್ತಿನಲ್ಲಿ ಸುವರ್ಣ ದಾಂಪತ್ಯದ ಸನ್ಮಾನ ಮಾದರಿ ಕಾರ್ಯ ಎಂದರು.
69 ವರ್ಷಗಳ ದಾಂಪತ್ಯ ಬದುಕು ಸಾಗಿಸಿದ ವನಜಾಕ್ಷಮ್ಮ–ಸುಬ್ರಹ್ಮಣ್ಯ ಐತಾಳ ದಂಪತಿ ಸೇರಿದಂತೆ ಯಶಸ್ವಿ ದಂಪತಿಗಳನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಪ್ರ ನೌಕರರ ಸಂಘದ ಎನ್.ಎಂ.ರಘುರಾಮ್, ಎಚ್.ಎಚ್.ಛಾಯಾಪತಿ, ಮ.ಸ.ನಂಜುಂಡಸ್ವಾಮಿ, ಜಿ.ಎಸ್.ಅನಂತ್, ಆರ್.ಅಚ್ಯುತರಾವ್, ಡಾ.ಎಸ್.ಶ್ರೀಧರ್, ನಾಗೇಶ್, ಪ್ರಭಾಕರ್ ಮತ್ತಿತರರು ಇದ್ದರು.
ಹಿರಿಯರ ಆಶೀರ್ವಾದ ಹೊಂದಿದ ಸಮುದಾಯವು ನೆಮ್ಮದಿ ಶಾಂತಿಯಿಂದ ಇರುತ್ತದೆ. ವಿಪ್ರ ಸಮಾಜ ಹಿರಿಯರನ್ನು ಗೌರವಿಸಲು ಮುಂದಾಗಿರುವುದು ರಾಜ್ಯಕ್ಕೆ ಮಾದರಿಯಾದ ನಡೆಯಾಗಿದೆಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ
ವರ್ಷದೊಳಗೆ ವಿಚ್ಛೇದನ ಆಗುತ್ತಿರುವ ಇಂದಿನ ದಿನಗಳಲ್ಲಿ 50 ವರ್ಷ ಒಟ್ಟಾಗಿ ಜೀವನ ನಡೆಸಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆಎಚ್.ಕೆ.ಕೇಶವಮೂರ್ತಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.