ಶಿವಮೊಗ್ಗ: ‘ಸಭೆಯಲ್ಲಾಗಿರುವ ನಿರ್ಣಯಗಳೇ ಬೇರೆ, ಅಧಿಕಾರಿಗಳು ಬರೆದು ಕೊಡುವ ಅನುಪಾಲನಾ ವರದಿಯೇ ಬೇರೆ’ ಎಂದು ವಿವಿಧ ಸಂಘಟನೆಗಳ ಮುಖಂಡರು ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಶುಕ್ರವಾರ ಮಹಾನಗರ ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಡೆಯಿತು.
ಅನುಪಾಲನಾ ವರದಿಯಲ್ಲಿ ಅಧಿಕಾರಿಗಳು ಕಾಟಾಚಾರದ ಉತ್ತರ ಕೊಟ್ಟಿದ್ದಾರೆ. ಕಳೆದ ಬಾರಿ ಬಜೆಟ್‍ನಲ್ಲಿ ಪ್ರಕಟಿಸಿದ ಯಾವುದೇ ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನಗೊಂಡಿಲ್ಲ. ನಮಗೆ ನೀಡಿದ ಅನುಪಾಲನಾ ವರದಿಯಲ್ಲಿ ಪ್ರಶ್ನೆ ಉತ್ತರಗಳು ಮತ್ತು ನೀಡಿದ ಅಂಕಿ-ಅಂಶಗಳು ಸಮರ್ಪಕವಾಗಿಲ್ಲ. ಕಾಮಗಾರಿ ಕೈಗೊಳ್ಳಲಾಗಿದೆ, ಆರಂಭಿಸಲಾಗುತ್ತಿದೆ, ಪ್ರಗತಿಯಲ್ಲಿದೆ ಎಂಬ ಹಾರಿಕೆ ಉತ್ತರ ನೀಡಲಾಗಿದ್ದು, ಈ ವರದಿಗೆ ಆಯುಕ್ತರ ಸಹಿ ಕೂಡ ಇಲ್ಲ ಎಂದು ನಾಗರಿಕ ಹಿತ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್ ಆರಂಭದಲ್ಲೇ ಆಯುಕ್ತರ ವಿರುದ್ಧ ಹರಿಹಾಯ್ದರು.
ಕಾಟಾಚಾರಕ್ಕೆ ಸಭೆ ನಡೆಸಬೇಡಿ: ‘ಆಯುಕ್ತರು ಯಾವುದೇ ಸಮಸ್ಯೆ ಹೇಳಿದರೂ ಸ್ಪಂದಿಸುತ್ತಿಲ್ಲ. ದೂರವಾಣಿ ಸ್ವೀಕರಿಸುವುದಿಲ್ಲ. ಸಲಹೆ ಕೊಡಿ ಎಂದು ಸಭೆ ಕರೆಯುತ್ತೀರಿ. ಆದರೆ, ಇಲ್ಲಿಗೆ ಬಂದರೆ ಸಭಾ ಮರ್ಯಾದೆ ನೀಡದೇ ಮನಬಂದಂತೆ ವರ್ತಿಸುತ್ತೀರಿ. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಕೊಡುವಂತೆ ಒತ್ತಾಯಿಸಿದರೂ ಮಾಹಿತಿ ನಿಡುವುದಿಲ್ಲ. ಅವೈಜ್ಞಾನಿಕ ಕಾಮಗಾರಿಗಳನ್ನು ಗಮನಕ್ಕೆ ತಂದರೂ ಕಿವಿ ಕೊಡುವುದಿಲ್ಲ. ಕಾಮಗಾರಿಗಳನ್ನು ಬಂದು ಪರಿಶೀಲಿಸುವುದಿಲ್ಲ. ಎಲ್ಲವೂ ನಿಮ್ಮ ಇಷ್ಟದಂತೆ ಮಾಡುವುದಾದರೆ, ಸಾರ್ವಜನಿಕರ ಅಭಿಪ್ರಾಯ ಕೇಳುವುದು ಏಕೆ? ಕಾಟಾಚಾರಕ್ಕೆ ಏಕೆ ಸಭೆ ಮಾಡುತ್ತೀರಿ’ ಎಂದು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅನುಪಾಲನ ವರದಿಗೆ ಸಹಿ ಇಲ್ಲದಿದ್ದಕ್ಕೆ ಗರಂ: ಪಾಲಿಕೆ ಆಯುಕ್ತರ ಸಹಿ ಇಲ್ಲದ ಅನುಪಾಲನ ವರದಿ ಸಿದ್ಧಪಡಿಸಿರುವ ಬಗ್ಗೆ ಸಭೆ ಆರಂಭದಲ್ಲೇ ಅಧಿಕಾರಿಗಳು ಆಕ್ಷೇಪ ಎದುರಿಸಬೇಕಾಯಿತು. ವಿವಿಧ ಪಕ್ಷಗಳ ಮುಖಂಡ ಒಬ್ಬರಾದ ನಂತರ ಒಬ್ಬರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಹಲವು ಬಾರಿ ಸಭೆಯಲ್ಲಿದ್ದ ಪ್ರಮುಖರನ್ನು ಸಮಾಧಾನಿಸುವ ವ್ಯರ್ಥ ಪ್ರಯತ್ನ ನಡೆಯಿತು. 11 ಗಂಟೆಗೆ ಆರಂಭವಾಗಬೇಕಿದ್ದ ಸಭೆ ಅರ್ಧ ತಾಸು ತಡವಾಗಿ ಆರಂಭವಾದರೂ ಅನುಪಾಲನಾ ವರದಿಯಲ್ಲಿ ಆಯುಕ್ತರ ಸಹಿ ಇಲ್ಲದ್ದಕ್ಕೆ 1.30ರವರೆಗೂ ಸಮಯ ಆಕ್ಷೇಪಣೆಗಳಲ್ಲಿಯೇ ಕಳೆಯಿತು. ಕೊನೆಗೂ ಉಪ ಮೇಯರ್ ಸುರೇಖಾ ಮುರಳೀಧರ್ ನಡಾವಳಿ ಅನುಪಾಲನಾ ವರದಿಯನ್ನು ಸರಿಪಡಿಸಿ ಆಯುಕ್ತರ ಸಹಿಯೊಂದಿಗೆ ಕೊಡುವುದಾಗಿ ಹೇಳಿ ಅಂತಿಮವಾಗಿ ಒಂದು ಪ್ರತಿಯನ್ನು ನೀಡಿ ಸಭೆ ಆರಂಭಿಸಲಾಯಿತಾದರೂ ಮತ್ತೆ ಸಾರ್ವಜನಿಕರಿಂದ ಟೀಕೆಗೆ ಗುರಿಯಾಯಿತು.
ಪಾಲಿಕೆಯ ಮಾಜಿ ಸದಸ್ಯ ಸತ್ಯನಾರಾಯಣ್ ಮಾತನಾಡಿ, ‘ಕಳೆದ ಬಾರಿ ಬಜೆಟ್‍ನಲ್ಲಿ ತಿಳಿಸಿದ ಹಾಗೆ ನೀರಿನ ಟ್ಯಾಂಕುಗಳ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿಲ್ಲ. ಪದೇ ಪದೇ ಬಾಕ್ಸ್ ಡ್ರೈನೇಜ್ ಕಾಮಗಾರಿಯನ್ನು ಮಾಡಲಾಗುತ್ತಿದೆ. ಅದು ಕೂಡ ಅವೈಜ್ಞಾನಿಕವಾಗಿದೆ. ವಿನೋಬನಗರ ಶಿವಾಲಯದ ಬಳಿ ಇರುವ ತರಕಾರಿ ಮಾರುಕಟ್ಟೆ ಕಟ್ಟಡ 14 ವರ್ಷಗಳಾದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಬಜೆಟ್‍ನಲ್ಲಿ ತಿಳಿಸಿದ ಯಾವುದೇ ಯೋಜನೆ ಅನುಷ್ಠಾನ ಗೊಳ್ಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್, ಉಪ ಮೇಯರ್, ಆಯುಕ್ತರಾದ ಚಿದಾನಂದ್ ವಠಾರೆ, ವಿವಿಧ ಸಂಘ– ಸಂಸ್ಥೆಗಳ ಪ್ರಮುಖರು ಇದ್ದರು.
ಸಭೆಯಲ್ಲಿ ಕೇಳಿ ಬಂದ ಹಕ್ಕೊತ್ತಾಯಗಳು
l ಬೀದಿ ಬದಿ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರ ನೀಡಿ
lಶುದ್ಧ ಕುಡಿಯುವ ನೀರಿನ ಬಗ್ಗೆ ಕ್ರಮ ವಹಿಸಿ
lಜನನ ಮತ್ತು ಮರಣ ಪತ್ರ ಆನ್‌ಲೈನ್ ಮೂಲಕ ನೀಡಿ
l ಕೆರೆ ಸಂರಕ್ಷಣೆಗೆ ಅನುದಾನ ಮೀಸಲಿಡಿ
lತೆರಿಗೆ ವಂಚನೆ ಬಗ್ಗೆ ಕ್ರಮ ಕೈಗೊಳ್ಳಿ
lಹಸಿರೀಕರಣಕ್ಕೆ ಒತ್ತು ನೀಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.