ADVERTISEMENT

ಅಡಿಕೆ ತೋಟದಲ್ಲಿ ಮಿಶ್ರ ಬೆಳೆಗೆ ಆದ್ಯತೆ ನೀಡಿ: ಮಹ್ಮದ್ ಅಮಾನುಲ್ಲಾ

ಅಂತರರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಜೋಮಿ ಮ್ಯಾಥ್ಯೂ ಅವರಿಗೆ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 4:33 IST
Last Updated 7 ಏಪ್ರಿಲ್ 2022, 4:33 IST
ಹೊಸನಗರ ಸಮೀಪದ ವರಕೋಡು ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಜೋಮಿ ಮ್ಯಾಥ್ಯು ಅವರನ್ನು ತಾಲ್ಲೂಕು ಬೆಳೆಗಾರರ ಸಂಘದಿಂದ ಸನ್ಮಾನಿಸಲಾಯಿತು.
ಹೊಸನಗರ ಸಮೀಪದ ವರಕೋಡು ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಜೋಮಿ ಮ್ಯಾಥ್ಯು ಅವರನ್ನು ತಾಲ್ಲೂಕು ಬೆಳೆಗಾರರ ಸಂಘದಿಂದ ಸನ್ಮಾನಿಸಲಾಯಿತು.   

ಹೊಸನಗರ: ತೋಟದಲ್ಲಿ ಮಿಶ್ರ ಬೆಳೆಯಿಂದ ಅಧಿಕ ಲಾಭ ಸಿಗಲಿದೆ ಎಂದು ಪ್ರಗತಿಪರ ಕೃಷಿಕ ಮಹ್ಮದ್ ಅಮಾನುಲ್ಲಾ ಸಲಹೆ ನೀಡಿದರು.

ಸಮೀಪದ ವರಕೋಡು ಗ್ರಾಮದ ತ್ರಿವೇಣಿ ಫಾರ್ಮ್‌ನಲ್ಲಿ ತಾಲ್ಲೂಕು ಬೆಳೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಜೋಮಿ ಮ್ಯಾಥ್ಯೂ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಕಾಳುಮೆಣಸು ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ತೋಟದಲ್ಲಿ ಅಡಿಕೆ ಮಾತ್ರ ಬೆಳೆಯದೇ ಅದರ ಜತೆಗೆ ಕಾಳುಮೆಣಸು, ಕಾಫಿ, ವೆನಿಲ್ಲಾ ಬೆಳೆಯಬಹುದು. ಮಿಶ್ರ ಬೆಳೆಯಿಂದ ಲಾಭ ಹೆಚ್ಚಾಗಲಿದೆ’ ಎಂದು ಸಲಹೆ ನೀಡಿದರು.

ADVERTISEMENT

‘3 ವರ್ಷಗಳಿಂದ ಹೊಸದಾಗಿ ಅಡಿಕೆ ತೋಟ ಮಾಡುವ ಪ್ರಮಾಣ 3 ಪಟ್ಟು ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ದರದಲ್ಲಿ ತೀವ್ರ ಕುಸಿತ ಕಾಣಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬೈರುಂಬೆ ರಾಮಚಂದ್ರ ಹೆಗಡೆ ಮಾತನಾಡಿ, ‘ಐಪಿಸಿ ಅಂತರರಾಷ್ಟ್ರೀಯ ಸಂಸ್ಥೆಯು ತಾಲ್ಲೂಕಿನ ಜೋಮಿ ಮ್ಯಾಥ್ಯೂ ಅವರಿಗೆ ಕಾಳುಮೆಣಸು ಕೃಷಿ ಕುರಿತು ಪ್ರಶಸ್ತಿ ನೀಡಿ ಗೌರವಿಸಿದೆ’ ಎಂದರು.

ಆಧುನಿಕ ಪದ್ಧತಿ, ವ್ಯವಸ್ಥಿತ ಪೋಷಣೆ, ನಿರ್ವಹಣೆಯಿಂದ ಕಾಳುಮೆಣಸು ಕೃಷಿ ಮಾಡಿದ ಇವರು ಈ ಭಾಗದ ಕೃಷಿಕರಿಗೆ ಮಾದರಿ ಎಂದರು.

ಜೋಮಿ ಮ್ಯಾಥ್ಯು ಮಾತನಾಡಿ, ‘25 ವರ್ಷಗಳ ಹಿಂದೆ ಎಂಬಿಎ ಪದವಿ ಪಡೆದು ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದ ನನಗೆ ಮಲೆನಾಡಿನ ಕೃಷಿ ಲೋಕ ಆಕರ್ಷಿಸಿತು. ಕೇರಳದಿಂದ ವಲಸೆ ಬಂದ ತಮಗೆ ಮಲೆನಾಡಿನ ಆತಿಥ್ಯ, ಕೃಷಿ ಸಲಹೆ, ಸಹಕಾರದಿಂದ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ತನಕ ಹೋಗಲು ಸಾಧ್ಯವಾಯಿತು’ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದತಾಲ್ಲೂಕು ಬೆಳೆಗಾರರ ಸಂಘದ ಕಾರ್ಯದರ್ಶಿ ಎಂ.ವಿ. ಜಯರಾಮ್‌, ‘ಯುವ ವಿದ್ಯಾವಂತ ಸಮುದಾಯ ಕೃಷಿಗೆ ಮರಳಿ ಬರುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದರು.

ಸಹಾಯಕ ತೋಟಗಾರಿಕೆ ನಿರ್ದೇಶಕ ಚಂದ್ರಶೇಖರ್, ಪ್ರಗತಿ ಪರ ಕೃಷಿಕರಾದ ಬೇಳೂರು ಗಿರಿಜ ರಾಧಾಕೃಷ್ಣ, ಮಳವಳ್ಳಿ ಜಗದೀಶ ರಾವ್, ಕೆ.ಎನ್. ಸ್ವರೂಪ, ಚಿಕ್ಕನಕೊಪ್ಪ ರಾಘವೇಂದ್ರ ಇದ್ದರು. ಜೋನ್ಸ್ ಜಾರ್ಜ್ ಸ್ವಾಗತಿಸಿದರು. ವಿನಾಯಕ ಅರೆಮನೆ ನಿರೂಪಿಸಿದರು. ಜ್ಞಾನೇಂದ ಆಚಾರ್ಯ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.