ADVERTISEMENT

ಶಿಕಾರಿಪುರ | ಹೋರಿಹಬ್ಬಕ್ಕೆ ಸಿದ್ಧತೆ: ರೋಮಾಂಚನಕಾರಿ ಸ್ಪರ್ಧೆಗೆ ಅಭಿಮಾನಿಗಳ ಕಾತರ

ಎಚ್.ಎಸ್.ರಘು
Published 9 ನವೆಂಬರ್ 2023, 6:16 IST
Last Updated 9 ನವೆಂಬರ್ 2023, 6:16 IST
<div class="paragraphs"><p>ಶಿಕಾರಿಪುರ ಪಟ್ಟಣದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಹೋರಿ ಹಬ್ಬದ ದೃಶ್ಯ </p></div>

ಶಿಕಾರಿಪುರ ಪಟ್ಟಣದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಹೋರಿ ಹಬ್ಬದ ದೃಶ್ಯ

   

(ಸಂಗ್ರಹ ಚಿತ್ರ)

ಶಿಕಾರಿಪುರ: ದೀಪಾವಳಿ ಹಬ್ಬದ ಪ್ರಯಕ್ತ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸಂಭ್ರಮದಿಂದ ನಡೆಯುವ ಜಾನಪದ ಸಂಸ್ಕೃತಿಯ ಪ್ರತೀಕವಾದ ಹೋರಿಹಬ್ಬ ಆಚರಣೆಯ ಸಿದ್ಧತೆ ಭರದಿಂದ ಸಾಗಿದೆ.

ADVERTISEMENT

ದೀಪಗಳ ಹಬ್ಬ ಬಂತೆಂದರೆ ತಾಲ್ಲೂಕಿನ ಸಾವಿರಾರು ಜನರು ಹೋರಿ ಬೆದರಿಸುವ ಸ್ಪರ್ದೆಯನ್ನು ಕಾತರದಿಂದ ಎದುರುನೋಡುತ್ತಾರೆ. ದೀಪಾವಳಿ ಆರಂಭದ ದಿನದಿಂದ ಅಂದಾಜು ಎರಡು ತಿಂಗಳವರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ‘ವಿಶೇಷ ದೀಪಾವಳಿ’ ಹೆಸರಿನಲ್ಲಿ ಆಯೋಜಿಸಲಾಗುತ್ತದೆ.

ಪ್ರತಿ ವರ್ಷ ದೀಪಾವಳಿಗೆ ಒಂದೆರಡು ತಿಂಗಳುಗಳ ಮುಂಚೆಯೇ ಹೋರಿ ಮಾಲೀಕರು, ಪ್ರೇಕ್ಷಕರು ರಾಜ್ಯದ ಹಲವು ಜಿಲ್ಲೆಗಳಿಗೆ ಹಾಗೂ ನೆರೆ ರಾಜ್ಯ ತಮಿಳುನಾಡಿಗೆ ಭೇಟಿ ನೀಡಿ ಸ್ಪರ್ಧೆಯಲ್ಲಿ ಉತ್ತಮವಾಗಿ ಪ್ರದರ್ಶನ ತೋರುವಂತಹ ಹೋರಿಗಳನ್ನು ಲಕ್ಷಾಂತರ ರೂಪಾಯಿ ನೀಡಿ ಖರೀದಿಸಿ ತರುತ್ತಾರೆ. ಪ್ರಸಕ್ತ ವರ್ಷವೂ ಹೋರಿಗಳನ್ನು ಖರೀದಿಸಿ ತರಲಾಗಿದ್ದು, ಸ್ಪರ್ಧೆಗೆ ಅವುಗಳನ್ನು ಅಣಿಗೊಳಿಸುವಲ್ಲಿ ಮಾಲೀಕರು ನಿರತರಾಗಿದ್ದಾರೆ.

ದೇವರ ಹಾಗೂ ಸಿನಿಮಾದ ಹೆಸರುಗಳನ್ನು ಹೋರಿಗಳಿಗೆ ಇರಿಸಲಾಗಿದ್ದು, ಅವುಗಳ ಛಾಯಾಚಿತ್ರಗಳು ಹಾಗೂ ವಿಡಿಯೊ ತುಣುಕುಗಳನ್ನು (ಫೋಟೊ ಶೂಟ್ ಮಾಡಿಸಿ) ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ತಮ್ಮ ಹೋರಿಗಳ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ.

ಬಿಸಿಲಿನ ತಾಪವನ್ನು ಲೆಕ್ಕಿಸದೇ ವಯಸ್ಸಿನ ಭೇದವಿಲ್ಲದೇ ಸಾವಿರಾರು ಜನ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಯೋಜಿಸುವ ಹೋರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳ ಮಾಲೀಕರು ತಮ್ಮ ಹೋರಿಗಳನ್ನು ಕೊಬ್ಬರಿ ಮಾಲೆ, ಬಲೂನ್‌, ಕಾಲ್ಗೆಜ್ಜೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿರುತ್ತಾರೆ. ಮಾಲೀಕರು ‘ಹಾಕೋ ಕೈಯ್ಯಾ ಮುಟ್ಟೋ ಮೈಯ್ಯಾ’ ಎಂದು ಭಾವೋದ್ವೇಗದಿಂದ ಘೋಷಣೆ ಹಾಕುತ್ತಾ ಸಂಭ್ರಮದಿಂದ ಹೋರಿ ಜತೆ ಸಾಗುತ್ತಾರೆ.

ಆಯೋಜಕರು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಹೋರಿಗಳಿಗೆ ಬಹುಮಾನವಾಗಿ ಬಂಗಾರದ ಆಭರಣ, ಬೈಕ್‌, ಟಿ.ವಿ. ಸೇರಿದಂತೆ ಹಲವು ಗೃಹಬಳಕೆ ವಸ್ತುಗಳನ್ನೂ ನೀಡುತ್ತಾರೆ. ಹೋರಿಹಬ್ಬದಲ್ಲಿ ವೇಗವಾಗಿ ಓಡುವ ಹೋರಿಗಳನ್ನು ಯುವಕರು ಹಿಡಿದು ಕೊಬ್ಬರಿ ಮಾಲೆ ಕೀಳುವ ರೋಮಾಂಚನಕಾರಿ ಸಾಹಸ ದೃಶ್ಯವನ್ನು ಸಾವಿರಾರು ಪ್ರೇಕ್ಷಕರು ಕುತೂಹಲದಿಂದ ಹರ್ಷೋದ್ಗಾರದೊಂದಿಗೆ ಕಣ್ತುಂಬಿಕೊಳ್ಳುತ್ತಾರೆ.

ಈ ಭಾಗದಲ್ಲಿ ಪ್ರಸಕ್ತ ವರ್ಷ ಬರಗಾಲ ಆವರಿಸಿದ್ದು, ಮುಂಗಾರು ಬೆಳೆಹಾನಿಯ ನಡುವೆಯೂ ದೀಪಾವಳಿ ಹಬ್ಬದ ಚಟುವಟಿಕೆಗಳು ಗರಿಗೆದರುತ್ತಿವೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನ ಉತ್ತಮ ಪ್ರದರ್ಶನ ತೋರುವ ಹೋರಿಗಳ ಕುರಿತು ಚರ್ಚೆ ನಡೆಸುತ್ತಿರುವುದು ಕಾಣಸಿಗುತ್ತದೆ.

Highlights - ಹೋರಿಗಳ ಹಬ್ಬಕ್ಕೆ ಆಸಕ್ತರಿಂದ ಸಕಲ ಸಿದ್ಧತೆ ಹಬ್ಬದಲ್ಲಿ ಪಾಲ್ಗೊಳ್ಳಲು ಹೊಸ ಹೋರಿ ಖರೀದಿ ಹೋರಿಗಳ ಪೋಷಣೆಯಲ್ಲಿ ಮಾಲೀಕರು ನಿರತ

Quote - ಹೋರಿ ಹಬ್ಬ ರೈತರ ಹಬ್ಬವಾಗಿದ್ದು ಜಾನಪದ ಸಂಸ್ಕೃತಿಯ ಪ್ರತೀಕವಾಗಿದೆ. ರೈತರು ಈ ಜಾನಪದ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕೃಷ್ಣ ರೈತ ಹೋರಿ ಹಬ್ಬ ಅಭಿಮಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.