ADVERTISEMENT

ಸಿಎಂ, ಮಾಜಿ ಸಿಎಂ ತೋರ್ಪಡಿಕೆ ಜಂಟಿ ಪ್ರಚಾರ

ಸೊರಬ ಶಾಸಕ ಕುಮಾರ್‌ ಬಂಗಾರಪ್ಪ ಲೇವಡಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 14:07 IST
Last Updated 11 ಏಪ್ರಿಲ್ 2019, 14:07 IST
ಕುಮಾರ್ ಬಂಗಾರಪ್ಪ
ಕುಮಾರ್ ಬಂಗಾರಪ್ಪ   

ಶಿವಮೊಗ್ಗ:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೋರ್ಪಡಿಕೆಗೆ ಜಂಟಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಹಾಗಾಗಿ, ಪ್ರಚಾರ ಸಂಪೂರ್ಣ ವಿಫಲವಾಗಿದೆ ಎಂದು ಸೊರಬ ಶಾಸಕ ಕುಮಾರ್‌ಬಂಗಾರಪ್ಪ ಟೀಕಿಸಿದರು.

ಇಬ್ಬರ ಸಂಬಂಧ ಹಳಸಿತ್ತು. ಈಗ ಚುನಾವಣೆಗಾಗಿ ತುಮಕೂರು, ಹಾಸನ, ಮಂಡ ಮತ್ತಿತರ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಮನಃಪೂರ್ವಕವಾಗಿನಡೆಸಿದ ಪ್ರಚಾರವಲ್ಲ. ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದ ಮೇಲೆ ಮಂಡ್ಯ ಜಿಲ್ಲಾಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ದೇಶದ ಅಭಿವೃದ್ಧಿಯ ದೂರದೃಷ್ಟಿ ಅನಾವರಣ ಮಾಡಿದೆ. ರೈತರು, ಬಡವರು, ಮಹಿಳೆಯರು, ಯುವಕರ ಶ್ರೇಯಕ್ಕೆ ಆದ್ಯತೆ ನೀಡಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಡವರಿಗೆ ₨ 72 ಸಾವಿರ ನೀಡುವುದಾಗಿ ಭರವಸೆ ನೀಡಿದೆ. ಆದರೆ, ಅದು ಎಷ್ಟು ದಿನಕ್ಕೆ ಒಮ್ಮೆ ಎಂದು ಖಚಿತಪಡಿಸಿಲ್ಲ. ಈ ಕುರಿತು ಎಐಸಿಸಿ ಅಧ್ಯಕ್ಷರಲ್ಲೇ ಗೊಂದಲವಿದೆ ಎಂದು ಕುಟುಕಿದರು.

ADVERTISEMENT

ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಹಲವು ಆಶ್ವಾಸನೆ ನೀಡಲಾಗಿದೆ. ಅದು ಈಡೇರುವ ಯಾವುದೇ ಭರವಸೆ ಇಲ್ಲ. ರೈತರಿಗೆ ಋಣಮುಕ್ತ ಪತ್ರ ಕೊಡುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಅದೂ ಈಡೇರುವ ಸಾಧ್ಯತೆ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದ ಹಣಕಾಸು ಪರಿಸ್ಥಿತಿ ಗೊತ್ತಿರುವ ಕಾರಣ ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದು ಛೇಡಿಸಿದರು.

ಮೈತ್ರಿ ಅಭ್ಯರ್ಥಿ ಶರಾವತಿ ಡೆಂಟಲ್ ಕಾಲೇಜ್, ಬಗರ್ ಹುಕುಂ ಹಾಗೂ ಕುಟುಂಬದ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ. ಚುನಾವಣೆಯಲ್ಲಿ ಅವರನ್ನು ಮತದಾರರೇ ಗಡಿಪಾರು ಮಾಡುವ ಕೆಲಸ ಮಾಡುತ್ತಾರೆ. ಅವರಿಗೆ ಬೆಂಬಲವಾಗಿ ನಿಂತಿರುವವರೂಕೂಡ ಲೂಟಿ ಮಾಡಿದವರು.ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆ ಮಾಡಿಸಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಸೋತರೂ ಇಂಥ ಕೆಲಸ ಮಾಡಿಸುವ ಪರಿಣಾಮ ಮತದಾರರು ಅವರನ್ನು ಮತ್ತೆ ಮತ್ತೆ ಸೋಲಿಸಬೇಕು ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮುಖಂಡರಾದ ಡಿ.ಎಸ್.ಅರುಣ್, ಶಿವರಾಜ್, ರತ್ನಾಕರ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.