ADVERTISEMENT

ಜನ, ಜಾನುವಾರು ರಕ್ಷಿಸದ ಸರ್ಕಾರ: ರೈತ ಸಂಘ ಆಕ್ರೋಶ

26ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 11:13 IST
Last Updated 22 ಆಗಸ್ಟ್ 2019, 11:13 IST
ಎಚ್‌.ಆರ್.ಬಸವರಾಜಪ್ಪ
ಎಚ್‌.ಆರ್.ಬಸವರಾಜಪ್ಪ   

ಶಿವಮೊಗ್ಗ: ಪ್ರಕೃತಿ ವಿಕೋಪದಂತಹ ಅವಘಡಗಳಿಂದ ಜನರನ್ನು ರಕ್ಷಿಸಲು ವಿಫಲವಾಗಿರುವ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆ.26ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ.

ಪ್ರಕೃತಿ ವಿಕೋಪದ ಮುನ್ನೆಚ್ಚರಿಕೆ ಅರಿತುಜನರಿಗೆ ಸೂಕ್ತ ರಕ್ಷಣ ನೀಡಬೇಕು.ಬ್ರಿಟಿಷ್ ಕಾಲದ ಪ್ರಕೃತಿ ವಿಕೋಪ ಪರಿಹಾರ ಮಾರ್ಗಸೂಚಿ ಬದಲಾಯಿಸಬೇಕು ಎಂದುಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದುಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ರಾಜ್ಯದಲ್ಲಿ ಬರಗಾಲದಿಂದ ಭಾರೀ ನಷ್ಟವಾಗಿದೆ. ನಿಖರ ಅಂದಾಜು ಮಾಡುವ ಸಮಯದಲ್ಲೇ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ತಲೆದೋರಿತ್ತು. ಅನೈತಿಕ ರಾಜಕಾರಣದ ಸನ್ನಿವೇಶದಲ್ಲೇ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿದು ರಾಜ್ಯದಲ್ಲಿ ಪ್ರವಾಹ ಉಂಟಾಗಿತ್ತು. ಕರಾವಳಿ, ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆಗೆ ಪ್ರವಾಹ ಉಂಟಾಗಿತ್ತು. ಜಲಾಶಯಗಳಿಂದ ನೀರನ್ನು ಹರಿಬಿಟ್ಟ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸ್ಥಿತಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಆಗ್ರಹಿಸಿದರು.

ADVERTISEMENT

ಹಲವು ಗ್ರಾಮಗಳು ಮುಳುಗಡೆಯಾಗಿವೆ. ಜನ, ಜಾನುವಾರುಗಳು ಕೊಚ್ಚಿಹೋಗಿವೆ. ಮಳೆಯ ಪ್ರಮಾಣವನ್ನು ತಂತ್ರಜ್ಞಾನದ ಮೂಲಕ ಅರಿಯಲು ಸಾಧ್ಯವಿದ್ದರೂ, ಅಧಿಕಾರಿಗಳು ನದಿಗೆ ದಿಢೀರ್ ಎಂದು ನೀರು ಹರಿಸಿದ್ದಾರೆ. ನೀರು ಹರಿಸುವ ಮೊದಲು ಜನರು, ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬಹುದಿತ್ತು. ಪ್ರಾಣ ಹಾನಿ ತಡೆಯಬಹುದಿತ್ತು. ಆಸ್ತಿಪಾಸ್ತಿಗಳ ರಕ್ಷಣೆ ಮಾಡಬಹುದಿತ್ತು. ಅಧಿಕಾರಿಗಳ ನಿರ್ಲಕ್ಷದಿಂದ ಜನರು ಕಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಯ್ನಾ, ಆಲಮಟ್ಟಿ, ಘಟಪ್ರಭಾ, ಹಿರಣ್ಯಕೇಶಿ, ದೂದ್ ಸಾಗರ್, ನಾರಾಯಣಪುರ ಜಲಾಶಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಈ ನೀರು ಒಮ್ಮೆಲೇ ಹೊರಬಿಟ್ಟ ಕಾರಣ ಹಳ್ಳಿಗಳು ಜಲಾವೃತಗೊಂಡವು. ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗಿದೆ. ರೈತರು ಗಂಜಿ ಕೇಂದ್ರಗಳಲ್ಲಿ ಬೇಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕೃತಿ ವಿಕೋಪದ ಪರಿಹಾರ ಹಿಂದಿನ ಬ್ರಿಟಿಷ್ ಮಾರ್ಗಸೂಚಿ. ಸದ್ಯದ ಮಾಹಿತಿ ಪ್ರಕಾರ 5.92 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಸಾವಿರಾರು ಮನೆಗಳು ನಾಶವಾಗಿವೆ. ಹೆಚ್ಚಿನ ಸಂಖ್ಯೆಯ ಮನೆಗಳು ಅರ್ಧ ಕುಸಿದಿವೆ. ಜಾನುವಾರುಗಳು ಮೃತಪಟ್ಟಿವೆ. ಎಲ್ಲಾ ನಷ್ಟವನ್ನೂ ಅಂದಾಜಿಸಬೇಕು. ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಎಚ್‌.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಮನೆ ಕಳೆದುಕೊಂಡವರಿಗೆ ₨ 10 ಲಕ್ಷ ನೀಡಲಾಗಿತ್ತು. ಈಗ ₨ 5 ಲಕ್ಷ ರೂ. ನೀಡುವುದು ಹಾಸ್ಯಸ್ಪದ. ಒಂದು ಹೆಕ್ಟೇರ್ ಕಬ್ಬು ಬೆಳೆಯಲು ಮೂಲ ಬಂಡವಾಳ, ಖರ್ಚು ಸೇರಿ ₨ 75 ಸಾವಿರ ಆಗುತ್ತದೆ. ಈಗಿನ ಮಾರ್ಗಸೂಚಿಯ ಪ್ರಕಾರ ₨ 13,500 ಕೊಡಲು ಅವಕಾಶವಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಂ.ಚಂದ್ರಪ್ಪ, ಮುಖಂಡರಾದ ಶಿವಮೂರ್ತಿ, ಕೆ.ರಾಘವೇಂದ್ರ, ಹಿಟ್ಟೂರು ರಾಜು, ಮಂಜಪ್ಪ, ಜಗದೀಶ್ ರಾಮಚಂದ್ರ, ಗುರುಶಾಂತ, ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.