
ಶಿವಮೊಗ್ಗ : ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನದ ಸಮಾರೋಪ ಸಮಾರಂಭ ನ.30ರಂದು ಬೆಳಿಗ್ಗೆ ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂಪಾರ್ಕ್) ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭಿಯಾನದಲ್ಲಿ ವಿಶೇಷವಾಗಿ ಗೀತೆಯ 11ನೇ ಅಧ್ಯಾಯ ಆಯ್ಕೆಮಾಡಿ, ಶಾಲಾ ಕಾಲೇಜುಗಳಲ್ಲಿ, ದೇವಸ್ಥಾನಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಇದರ ಪಠಣ, ಇದಕ್ಕೆ ಸಂಬಂಧಿಸಿದ ಉಪನ್ಯಾಸಗಳ ಏರ್ಪಡಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ 280ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶ್ಲೋಕಪಠಣ ನಡೆದಿದ್ದು, ಸುಮಾರು 16,000 ಮಕ್ಕಳು ಮತ್ತು 5,200 ಜನರನ್ನು ತಲುಪಲು ಪ್ರಯತ್ನಿಸಲಾಗಿದೆ ಎಂದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ 1,500ಕ್ಕೂ ಹೆಚ್ಚು ಶ್ಲೋಕ ಪಠಣಗಳಾಗಿವೆ. 300ಕ್ಕೂ ಹೆಚ್ಚು ಉಪನ್ಯಾಸಗಳಾಗಿವೆ. ಈ ಅಭಿಯಾನ ಸುಮಾರು 60,000ಕ್ಕೂ ಹೆಚ್ಚು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಶಾಲಾ ಮಕ್ಕಳು ಸೇರಿದಂತೆ ಸುಮಾರು 25,000 ಜನರು ಈ ಮಹಾಸಮರ್ಪಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಡಿಸೆಂಬರ್ 1ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗೀತಾ ಜಯಂತಿ ದಿನದ ಅಂಗವಾಗಿ ಸಮಗ್ರ ಗೀತಾ ಪಠಣ ನಡೆಯಲಿದೆ. ನವೆಂಬರ್ 29ರಂದು ರಾಜ್ಯಮಟ್ಟದ ಭಗವದ್ಗೀತಾ ಸ್ಪರ್ಧೆ ನಗರದ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ನಡೆಯಲಿದೆ ಎಂದರು.
ಅಭಿಯಾನದ ಮಹಾಸಮರ್ಪಣೆಗೆ ಹೊರ ಜಿಲ್ಲೆಗಳಿಂದ ಬರುವವರಿಗೆ ವಾಹನ ವ್ಯವಸ್ಥೆ, ವಾಸ್ತವ್ಯಕ್ಕೆ ಔಷಧ ಭವನ ಹಾಗೂ ಹವ್ಯಕ ಮಹಿಳಾ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಫೋನ್ ಸಂಖ್ಯೆ : 94495–07781 ಸಂಪರ್ಕಿಸಬಹುದು. ಅಗತ್ಯಬಿದ್ದರೆ ಆದಿಚುಂಚನಗಿರಿ ಶಾಲೆಯಲ್ಲಿಯೂ ವ್ಯವಸ್ಥೆ ಮಾಡಲಾಗುವುದು. ಸಭಾ ಕಾರ್ಯಕ್ರಮದ ನಂತರ ಶ್ರೀಪಾದ ಮೇ ಶರಣಂ ಎಂಬ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಜಿಲ್ಲಾ ಕಾರ್ಯಾಧ್ಯಕ್ಷ ಅಶೋಕ್ ಜಿ. ಭಟ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಇದ್ದರು.
ಕೇರಳ ರಾಜ್ಯಪಾಲರು ಭಾಗಿ: ಬಿವೈಆರ್ ಅಭಿಯಾನದ ಮಹಾಪೋಷಕರೂ ಆದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ ವಿವಿಧ ಮಠಾಧೀಶರು ಸೇರಿದಂತೆ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಭಾಗವಹಿಸಲಿದ್ದಾರೆ ಎಂದರು. ಗೀತಾ ಅಭಿಯಾನದ ಮಹಾಸಮರ್ಪಣೆ ಈ ಬಾರಿ ಶಿವಮೊಗ್ಗಕ್ಕೆ ದೊರಕಿದೆ. ಅದು ಈ ಭಾಗದ ಜನರ ಪುಣ್ಯ. ಇದಕ್ಕಾಗಿ ಸ್ವರ್ಣವಲ್ಲೀ ಶ್ರೀಗಳಿಗೆ ಧನ್ಯವಾದ ಅರ್ಪಿಸುವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.