ADVERTISEMENT

ಕಾಂಗ್ರೆಸ್‌ಗೂ– ಅಪರಾಧ ಕೃತ್ಯಗಳಿಗೂ ಅವಿನಾಭಾವ ಸಂಬಂಧ

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಆರೋಪ

​ಪ್ರಜಾವಾಣಿ ವಾರ್ತೆ
Published 25 ಮೇ 2024, 16:23 IST
Last Updated 25 ಮೇ 2024, 16:23 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಶಿವಮೊಗ್ಗ: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜನರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ವಿಶೇಷವಾಗಿ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಕಾಂಗ್ರೆಸ್‌ ಪಕ್ಷ ಹಾಗೂ ಅಪರಾಧ ಕೃತ್ಯಗಳಿಗೆ ಅವಿನಾಭಾವ ಸಂಬಂಧವಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲವಾಗಿದೆ. ಈ ಸರ್ಕಾರ ಪೊಲೀಸ್ ವ್ಯವಸ್ಥೆಯನ್ನು ರಾಜಕಾರಣಕ್ಕೆ ಬಳಸಿಕೊಂಡು ಅವರ ಆತ್ಮಸ್ಥೈರ್ಯ ಕುಗ್ಗಿಸಿದೆ’ ಎಂದರು.

‘ಚನ್ನಗಿರಿಯಲ್ಲಿ ಶುಕ್ರವಾರ ಪ್ರಕರಣವೊಂದರಲ್ಲಿ ಲಾಕಪ್‌ಡೆತ್ ಎಂದು ಆರೋಪಿಸಿ ಸಾವಿರಾರು ಜನ ಕೆಲವೇ ನಿಮಿಷಗಳಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ’ ಎಂದರು. 

ADVERTISEMENT

‘ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದರೆ ಅದನ್ನು ಸರ್ಕಾರ ನಿರಾಕರಿಸುತ್ತದೆ. ಎಫ್ಎಸ್ಎಲ್ ವರದಿ ಬಂದ ಬಳಿಕ ಒಪ್ಪಿಕೊಳ್ಳುತ್ತದೆ. ಕೊಪ್ಪದಲ್ಲೂ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ವಿಡಿಯೊ ವೈರಲ್ ಆಗಿದೆ. ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಹುಬ್ಬಳ್ಳಿಯ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಪ್ರಕರಣ ನಡೆದಾಗಲೂ ಗೃಹ ಸಚಿವರು ಅದು ಪ್ರೇಮ ಪ್ರಕರಣ ಎಂದು ಬೇಜವಾಬ್ದಾರಿಯ ಹೇಳಿಕೆ ನೀಡುತ್ತಾರೆ. ಯಾದಗಿರಿಯಲ್ಲಿ ರೊಟ್ಟಿ ಕೇಳಲು ಹೋದ ದಲಿತನ ಕೊಲೆಯಾಗುತ್ತದೆ. ಈ ಸರ್ಕಾರ ಬಂದ ಮೇಲೆ ಅಪರಾಧ ಪ್ರಕರಣ ಹೆಚ್ಚಾಗಿವೆ. ಆಂಧ್ರದಿಂದ ಬಂದು ಇಲ್ಲಿ ರೇವ್ ಪಾರ್ಟಿ ಮಾಡುತ್ತಾರೆ. ಈ ಸರ್ಕಾರ ಬದುಕಿದೆಯಾ ಎಂಬ ಸಂಶಯ ಕಾಡುತ್ತಿದೆ’ ಎಂದರು.

‘ಒಂದು ಸಮುದಾಯದ ಪರ ತುಷ್ಟೀಕರಣದ ರಾಜಕಾರಣದಿಂದ ಕರ್ನಾಟಕ ಅಶಾಂತಿಯ ತೋಟವಾಗಿದೆ. ದೇಶದ್ರೋಹಿಗಳು ಇದು ನಮ್ಮ ಸರ್ಕಾರ ಎಂದು ಹೆಮ್ಮೆಯಿಂದ ಹೇಳುತ್ತಾರೆ’ ಎಂದರು.

‘ಕೇಂದ್ರ ಗೃಹ ಸಚಿವರು ಸರ್ಕಾರದ ಬಗ್ಗೆ ಟೀಕೆ ಮಾಡಿದರೆ ಬೆಂಗಳೂರು ಬ್ರ್ಯಾಂಡ್‌ಗೆ ಹೊಡೆತ ಬೀಳುತ್ತದೆ. ಬಂಡವಾಳ ಹೂಡಲು ಯಾರೂ ಮುಂದೆ ಬರುವುದಿಲ್ಲ ಎನ್ನುತ್ತಾರೆ. ಇವರ ದುರಾಡಳಿತದಿಂದ ರಾಜ್ಯಕ್ಕೆ ಮತ್ತು ಬೆಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪೊಲೀಸರ ಮಾನಸಿಕತೆ ಬದಲಾಗಿದ್ದು, ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ರೌಡಿಪಟ್ಟಿ ದಾಖಲಿಸಿ ಜೈಲಿಗಟ್ಟುವ ಕಾರ್ಯ ನಡೆಯುತ್ತಿದೆ’ ಎಂದರು.
 
‘ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಯಾಕೆ ಧ್ವನಿ ಎತ್ತುತ್ತಿಲ್ಲ’ ಎಂಬ ಪ್ರಶ್ನೆಗೆ, ‘ನಮ್ಮ ಪಕ್ಷ ಮತ್ತು ನಾಯಕರು ಇದನ್ನು ಖಂಡಿಸಿದ್ದಾರೆ. ಸರ್ಕಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ದತ್ತಾತ್ರಿ, ರತ್ನಾಕರ ಶೆಣೈ, ಕೆ.ವಿ.ಅಣ್ಣಪ್ಪ, ಭವಾನಿ ರಾವ್ ಮೋರೆ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.