ಸಾಗರ: ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಭಾರತದಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಮನಸ್ಥಿತಿ ಇಲ್ಲವರಿಗೆ ಸಂವಿಧಾನದ ಮೌಲ್ಯಗಳನ್ನು ಪ್ರತಿಪಾದಿಸುವ ಹಕ್ಕು ಕೂಡ ಇಲ್ಲ ಎಂದು ಬರಹಗಾರ ದು.ಗು.ಲಕ್ಷ್ಮಣ್ ಹೇಳಿದರು.
ಇಲ್ಲಿನ ಅಜಿತ ಸಭಾಭವನದಲ್ಲಿ ಸೇವಾ ಸಾಗರ ಬಳಗ ಭಾನುವಾರ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ಸೇರಿದವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾತೆತ್ತಿದರೆ ಕೆಲವರು ಸಂವಿಧಾನದ ಆಶಯಗಳನ್ನೇ ಎತ್ತಿ ತಮ್ಮ ವಾದವನ್ನು ಮಂಡಿಸುತ್ತಾರೆ. ಆದರೆ ತುರ್ತು ಪರಿಸ್ಥಿತಿಯ ವಿಷಯ ಬಂದರೆ ಮೌನ ವಹಿಸುತ್ತಾರೆ. ಇಂತಹ ಇಬ್ಬಗೆಯ ನೀತಿಯಿಂದಲೇ ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿರುವುದು ಎಂದು ಅವರು ಹೇಳಿದರು.
ತುರ್ತು ಪರಿಸ್ಥಿತಿ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಟ ನಡೆಸಿದವರನ್ನು ಕೂಡ ಜೈಲಿಗೆ ಕಳುಹಿಸಿ ಚಿತ್ರಹಿಂಸೆ ನೀಡಿದ್ದು ಕಾಂಗ್ರೆಸ್‌ನ ಕರಾಳ ಇತಿಹಾಸವಾಗಿದೆ. ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಅಂದು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವದ ಪರ ಧ್ವನಿ ಎತ್ತಿದ ದೇಶಭಕ್ತರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ತುರ್ತು ಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿದ ಶಂಕರ ನಾರಾಯಣ ಭಟ್ಟ ಚಿಕ್ಕಬಿಲಗುಂಜಿ, ಎಚ್.ಸಿ.ಜಗದೀಶ್, ಶ್ರೀನಿವಾಸ ಬೇದೂರು, ದು.ಗು.ಲಕ್ಷ್ಮಣ್, ಕೆ.ಜಿ.ರಾಮರಾವ್, ಕಮಲಾಕ್ಷಮ್ಮ ಕಾನುಗೋಡು ಅವರನ್ನು ಸನ್ಮಾನಿಸಲಾಯಿತು.
ದು.ಗು.ಲಕ್ಷ್ಮಣ್ ಸಂಪಾದಕತ್ವದ ‘ಕಾಂಗ್ರೆಸ್ ಕರಾಳ ಕತೆ’, ಹೊ.ವೆ. ಶೇಷಾದ್ರಿ ಸಂಪಾದಕತ್ವದ ‘ಭುಗಿಲು’ ಕೃತಿಯನ್ನು ಸೇವಾ ಸಾಗರ ಸಂಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಬಿಡುಗಡೆ ಮಾಡಿದರು.
ಯು.ಎಚ್.ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಅಬಸೆ ದಿನೇಶ್ ಕುಮಾರ್ ಜೋಷಿ, ಟಿ.ಡಿ.ಮೇಘರಾಜ್, ಮ.ಸ.ನಂಜುಂಡಸ್ವಾಮಿ, ಮಹಾಬಲಗಿರಿ, ಜಯಾ ಪೈ, ರಾಜೇಂದ್ರ ಖಂಡಿಕಾ, ನಾರಾಯಣ ಮೂರ್ತಿ ಕಾನುಗೋಡು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.