ADVERTISEMENT

ನಾರಾಯಣಗುರು ವೈದ್ಯಕೀಯ ಕಾಲೇಜು ಸ್ಥಾಪಿಸಲು ಪ್ರಸ್ತಾವ: ಕುಮಾರ್‌ ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 2:35 IST
Last Updated 11 ಸೆಪ್ಟೆಂಬರ್ 2022, 2:35 IST
ಸೊರಬದ ರಂಗಮಂದಿರದಲ್ಲಿ ಶನಿವಾರ ನಡೆದ ನಾರಾಯಣಗುರುಗಳ 168ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಾಸಕ ಕುಮಾರ್ ಬಂಗಾರಪ್ಪ ಉದ್ಘಾಟಿಸಿದರು.
ಸೊರಬದ ರಂಗಮಂದಿರದಲ್ಲಿ ಶನಿವಾರ ನಡೆದ ನಾರಾಯಣಗುರುಗಳ 168ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಾಸಕ ಕುಮಾರ್ ಬಂಗಾರಪ್ಪ ಉದ್ಘಾಟಿಸಿದರು.   

ಸೊರಬ:ಆರ್ಯ ಈಡಿಗ ನಿಗಮ ಸ್ಥಾಪಿಸುವಂತೆ ಒತ್ತಾಯಿಸಲಾಗುವುದು. ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿ ವ್ಯಾಪ್ತಿಯ ಆಲಹಳ್ಳಿ ಗ್ರಾಮದ ಬಳಿ ನಾರಾಯಣಗುರು ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದುಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಆರ್ಯ ಈಡಿಗ ಸಮಾಜ, ವಿವಿಧ ಸಂಘಟನೆಗಳು ಹಾಗೂ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣಗುರುಗಳ ಹೆಸರಿನಲ್ಲಿ ವಸತಿಶಾಲೆ ಪ್ರಾರಂಭವಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ₹ 30ಕೋಟಿ ಅನುದಾನ ಬಿಡುಗಡೆಯಾಗಿದೆ. ತಳ ಸಮುದಾಯದಲ್ಲಿ ಜನಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಸತತ ಪರಿಶ್ರಮದಿಂದಾಗಿ ಇಂದು ಆರ್ಯ ಈಡಿಗ ಸಮಾಜ ಪರಿವರ್ತನೆಗೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ADVERTISEMENT

ಬೆತ್ತಲೆಸೇವೆಯಂತಹ ಅನಿಷ್ಟ ಪದ್ಧತಿ ಜಾರಿಯಲ್ಲಿದ್ದ ತಾಲ್ಲೂಕಿನಲ್ಲಿ ಶಿಕ್ಷಣ ಹಾಗೂ ಹೋರಾಟದಿಂದ ಬೆತ್ತಲೆಸೇವೆ ನಿಷೇಧಗೊಂಡಿದೆ. ಜನರ ಮನಸ್ಸಿನ ಬದಲಾವಣೆ ಮೇಲೆ ಪರಿಣಾಮ ಬೀರುವಂತಹ ಪ್ರಯತ್ನಗಳು ನಡೆದರೆ ಸಮಾಜವೂ ಬದಲಾವಣೆಗೊಳ್ಳುತ್ತದೆ ಎನ್ನುವುದಕ್ಕೆ ಚಂದ್ರಗುತ್ತಿ ಬೆತ್ತಲೆಸೇವೆ ಸಾಕ್ಷಿಯಾಗಿದೆ ಎಂದರು.

ಮೌಢ್ಯ ಹಾಗೂ ಉನ್ನತ ವರ್ಗದವರ ದರ್ಪಗಳನ್ನು ಮೆಟ್ಟಿನಿಂತು ಸಮಾನತೆಯ ಆಶಯದಲ್ಲಿ ಬದುಕಲು ಶಿಕ್ಷಣ ಮತ್ತು ಔದ್ಯೋಗಿಕ ಕ್ರಾಂತಿಗೆ ಮುನ್ನುಡಿ ಬರೆದವರು ನಾರಾಯಣಗುರು ಎಂದು ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ಮೋಹನ್ ಚಂದ್ರಗುತ್ತಿ ಹೇಳಿದರು.

ರಂಗನಾಥಸ್ವಾಮಿ ದೇವಸ್ಥಾನದಿಂದ ನಾರಾಯಣಗುರುಗಳ ಭಾವಚಿತ್ರದ ಮೆರವಣಿಗೆ ನಡೆಯಿತು.

ತಾಲ್ಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಕೆ. ಅಜ್ಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಡಿಗ ಸಮಾಜದ ಮಾಜಿ ಅಧ್ಯಕ್ಷ ಹನುಮಂತಪ್ಪ ಯಲಸಿ, ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಎಂ.ಡಿ. ಉಮೇಶ್, ಜೆ.ಶಿವಾನಂದಪ್ಪ, ಜಿ.ಡಿ. ನಾಯಕ, ಎಂ.ಡಿ. ಶೇಖರ್, ಮಹಾದೇವಪ್ಪ, ಗುರುಮೂರ್ತಿ, ಪರಶುರಾಮ್ ಸಣಬೈಲ್, ನಾಗೇಶ್, ನಾಗರಾಜ್ ಚಿಕ್ಕಸವಿ, ಲಿಂಗೇಶ್, ಬಿ.ಲಿಂಗಪ್ಪ, ರಾಜು ಮಳಲಗದ್ದೆ, ಪಾಣಿ ಡಾಕಪ್ಪ, ಭರತ್ ತಾಳಗುಪ್ಪ, ಮಂಜುನಾಥ್ ಓಟೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.