ADVERTISEMENT

ಹಲಾಲ್ ಮಾಡಿದ ಆಹಾರ: ವಿರೋಧ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 3:55 IST
Last Updated 18 ಅಕ್ಟೋಬರ್ 2022, 3:55 IST
ಶಿವಮೊಗ್ಗದ ಹಿಂದೂ ಜನ ಜಾಗೃತಿ ಸಮಿತಿಯ ಸದಸ್ಯರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗದ ಹಿಂದೂ ಜನ ಜಾಗೃತಿ ಸಮಿತಿಯ ಸದಸ್ಯರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಮಾಂಸಾಹಾರದ ತಿನಿಸುಗಳ ಮೆನು ಕಾರ್ಡ್‌ನಲ್ಲಿ ಹಲಾಲ್ ಮತ್ತು ನಾನ್ ಹಲಾಲ್ ಎಂದು ವರ್ಗೀಕರಣ ಮಾಡಿ ಗ್ರಾಹಕರಿಗೆ ಒದಗಿಸಬೇಕು. ಗ್ರಾಹಕರಿಗೆ ಒತ್ತಾಯಪೂರ್ವಕವಾಗಿ ಹಲಾಲ್ ಮಾಡಿದ ತಿನಿಸುಗಳನ್ನು ಮಾರಾಟ ಮಾಡಲು ಅವಕಾಶ ನೀಡದಂತೆ ಒತ್ತಾಯಿಸಿ ಹಿಂದೂ ಜನ ಜಾಗೃತಿ ಸಮಿತಿಯ ಸದಸ್ಯರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದೇಶದ ಶೇ 15ರಷ್ಟಿರುವ ಮುಸ್ಲಿಂ ಸಮಾಜ ಹಲಾಲ್ ಮಾಡಿದ ಮಾಂಸಾಹಾರ ಸೇವಿಸುತ್ತದೆ. ಆದರೆ ಈ ಆಚರಣೆಯನ್ನು ಶೇ 85ರಷ್ಟಿರುವ ಹಿಂದೂ ಸಮಾಜದ ಮೇಲೆ ಹೇರಲಾಗುತ್ತಿದೆ. ಇದನ್ನು ಸಮಿತಿ ವಿರೋಧಿಸುತ್ತದೆ. ಜತೆಗೆ ಹಲಾಲ್ ತಿನ್ನಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಪ್ರತಿಭಟನಕಾರರು ಕಿಡಿಕಾರಿದರು.

ಹಲಾಲ್ ಮಾಡಿದ ಆಹಾರ ಎಂಬ ಪ್ರಮಾಣಪತ್ರವನ್ನು ಮುಸ್ಲಿಂ ಸಂಘಟನೆಗಳಿಂದ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂತರ್ಗತ ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರ ಹಾಗೂ ಪ್ರತಿಯೊಂದು ರಾಜ್ಯದಲ್ಲಿ ಸ್ವತಂತ್ರವಾದ ಆಹಾರ ಮತ್ತು ಔಷಧ ಆಡಳಿತ ವಿಭಾಗ ಅಸ್ತಿತ್ವದಲ್ಲಿರುವಾಗ ಇದನ್ನು ಮುಸ್ಲಿಂ ಸಂಘಟನೆಗಳಿಂದ ನೀಡುವುದು ಸರಿಯಲ್ಲ. ಜಾತ್ಯತೀತ ಭಾರತದಲ್ಲಿ ಧಾರ್ಮಿಕ ಆಧಾರದಲ್ಲಿ ಪ್ರಮಾಣಪತ್ರ ನೀಡುವುದು ಕಾನೂನುಬಾಹಿರವಾಗಿದೆ ಎಂದು ದೂರಿದರು.

ADVERTISEMENT

ಹಿಂದೂ ಗ್ರಾಹಕರಿಗೆ ಹಲಾಲ್ ರಹಿತ ಪದಾರ್ಥಗಳನ್ನು ತಕ್ಷಣ ಒದಗಿಸಿಕೊಡಬೇಕು. ಈ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸಬೇಕು. ಇಲ್ಲವಾದರೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಮಿತಿಯ ವಿಜಯ್ ರೇವಣ್ಕರ, ಪ್ರದೀಪ, ಸುನೀತಾ, ಸೀಮಾ, ಶ್ರೀಕಾಂತ್, ಶ್ರೀಪಾದ, ಸೌಮ್ಯಾ, ಪವನ್, ಮಿಥುನ್ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.