ADVERTISEMENT

ಮಹಾನಗರ ಪಾಲಿಕೆ ನೌಕರರ ಮುಷ್ಕರ

ಏಳನೇ ವೇತನ ಆಯೋಗದ ಸೌಲಭ್ಯ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 3:17 IST
Last Updated 9 ಜುಲೈ 2025, 3:17 IST
ಶಿವಮೊಗ್ಗದ ಮಹಾನಗರ ಪಾಲಿಕೆ ನೌಕರರು ಮಂಗಳವಾರ ಆರಂಭಿಸಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಬೆಂಬಲ ವ್ಯಕ್ತಪಡಿಸಿದರು 
ಶಿವಮೊಗ್ಗದ ಮಹಾನಗರ ಪಾಲಿಕೆ ನೌಕರರು ಮಂಗಳವಾರ ಆರಂಭಿಸಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಬೆಂಬಲ ವ್ಯಕ್ತಪಡಿಸಿದರು    

ಶಿವಮೊಗ್ಗ: ಏಳನೇ ವೇತನ ಆಯೋಗದ ಸೌಲಭ್ಯ ಪೌರಸೇವಾ ಸಂಸ್ಥೆಗಳ ನೌಕರರಿಗೂ ವಿಸ್ತರಿಸುವಂತೆ ಹಾಗೂ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿ ಹಾಗೂ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ವೇತನ ಆಯೋಗದ ಶಿಫಾರಸುಗಳನ್ನು ಪೌರಸೇವಾ ನೌಕರರಿಗೆ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕು. ಅದಕ್ಕೆ ಆರ್ಥಿಕ ಇಲಾಖೆಯಿಂದಲೇ ಅನುದಾನ ಬಿಡುಗಡೆ ಮಾಡಬೇಕು. ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಪ್ರಕಟಿಸಬೇಕು. ಕೆಜಿಐಡಿ, ಜಿಪಿಎಫ್ ಪಾಲಿಕೆ ನೌಕರರಿಗೂ ಜಾರಿಗೊಳಿಸಬೇಕು. ನಗದು ರಹಿತ ಆರೋಗ್ಯ ಸೌಲಭ್ಯವನ್ನು ಒಳಗೊಂಡಿರುವ ಜ್ಯೋತಿ ಆರೋಗ್ಯ ಸಂಜೀವಿನಿ ಯೋಜನೆಯನ್ನು ಪೌರಕಾರ್ಮಿಕರಿಗೂ ಜಾರಿಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಮುಂಬಡ್ತಿ ಪಡೆಯಲು ವಂಚಿತರಾಗಿರುವ ಪಾಲಿಕೆ ಅಧಿಕಾರಿಗಳು ಮತ್ತು ನೌಕರರಿಗೆ ವೃಂದವಾರು ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಸ್ಥಳಕ್ಕೆ ಭೇಟಿ ನೀಡಿ, ‘ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದೇನೆ. ನಿಮ್ಮ ಬೇಡಿಕೆಗಳ ಬಗ್ಗೆ ಈಗಾಗಲೇ ಮೇಲಿನವರ ಗಮನಕ್ಕೆ ತಂದಿದ್ದೇನೆ’ ಎಂದರು.

ಮುಷ್ಕರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳಾದ ಪಿ.ಕುಮಾರ್, ಗೋವಿಂದಪ್ಪ, ಎಸ್.ಜಿ. ಮಂಜಣ್ಣ, ಡಿ.ಮೋಹನ್, ಜುಬೇದುಲ್ಲಾ, ಲೋಹಿತ್, ತುಷಾರ್ ಬಿ. ಹೊಸೂರು, ಡಿ.ನಾಗೇಂದ್ರ, ವಿಕಾಸ್, ನಾಗೇಶ್ ನೇತೃತ್ವ ವಹಿಸಿದ್ದರು.

- ಷಡಾಕ್ಷರಿ ಭೇಟಿ; ಮುಷ್ಕರಕ್ಕೆ ಬೆಂಬಲ

ರಾಜ್ಯದ 10 ಮಹಾನಗರ ಪಾಲಿಕೆಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು ಅವರಿಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು. ಮುಷ್ಕರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನೌಕರರ ಬೇಡಿಕೆ ನ್ಯಾಯಯುತವಾಗಿದೆ. ಅವುಗಳನ್ನು ಈಡೇರಿಸಿದರೆ ಸರ್ಕಾರಕ್ಕೆ ಹೊರೆ ಆಗುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ. ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಬಹುತೇಕ ಸಮಸ್ಯೆ ಬಗೆಹರಿಯುವ ಸೂಚನೆ ಕಾಣುತ್ತಿದೆ ಎಂದರು. ‘ನೌಕರರಲ್ಲಿ ಒಗ್ಗಟ್ಟಿರಬೇಕು. ಕೊನೆಯವರೆಗೂ ಹೋರಾಟದ ಮನೋಭಾವವಿರಬೇಕು. ನಮ್ಮ ಸಂಘದ ಬೆಂಬಲ ನಿಮಗೆ ಇದೆ. ಸದಾ ನಿಮ್ಮೊಂದಿಗೆ ಇದ್ದೇನೆ’ ಎಂದರು.   ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್‌ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.