ADVERTISEMENT

ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಿ

ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 2:13 IST
Last Updated 2 ಆಗಸ್ಟ್ 2022, 2:13 IST
ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹಮ್ಮಿಕೊಂಡರು.
ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹಮ್ಮಿಕೊಂಡರು.   

ಶಿವಮೊಗ್ಗ: ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡಗಳನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

‘ಕೇಂದ್ರ ಸರ್ಕಾರ ಇತರೆ ಹಿಂದುಳಿದ ವರ್ಗಗಳ ಸಮುದಾಯಗಳನ್ನು ಒಬಿಸಿ ಪಟ್ಟಿಗೆ ಸೇರಿಸಲು ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ 60 ವರ್ಷಗಳಿಂದ ಲಿಂಗಾಯತ ಸಮುದಾಯ ಹಿಂದುಳಿದ ಪಟ್ಟಿಯಲ್ಲಿದ್ದರೂ, ಕೇಂದ್ರ ಸರ್ಕಾರ ಮಾತ್ರ ಒಬಿಸಿ ಪಟ್ಟಿಗೆ ಸೇರಿಸದೇ ಇರುವುದು ದುರಾದೃಷ್ಟಕರ. ಈಗಾಗಲೇ ಹಿಂದುಳಿದ ಪಟ್ಟಿಗೆ ಸೇರಿರುವ ಇತರೆ ಸಮುದಾಯಗಳಿಗಿಂತ ನಮ್ಮ ಸಮುದಾಯ ಹಿಂದುಳಿದಿದೆ’ ಎಂದು ದೂರಿದರು.

ವೀರಶೈವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮತ್ತು ಸಮಾಜದ ಸರ್ವಾಂಗೀಣ ಬೆಳವಣಿಗೆಗಾಗಿ ಸಮುದಾಯದ ಎಲ್ಲಾ 98 ಉಪಜಾತಿಗಳನ್ನು ಕೇಂದ್ರ
ಸರ್ಕಾರ ತಕ್ಷಣವೇ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಿ ಎಂದು ಆಗ್ರಹಿಸಿದರು.

ADVERTISEMENT

ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಕಾಯಕ ಮತ್ತು ದಾಸೋಹ ಕಲ್ಪನೆ ಇಟ್ಟುಕೊಂಡು ಬಂದಿರುವ ವೀರಶೈವ ಲಿಂಗಾಯತ ಸಮಾಜ ಆದರ್ಶ ಸಮಾಜವಾಗಿದೆ. ಇಂದು ದೇಶದಲ್ಲಿ ಸಂವಿಧಾನ ಕೊಟ್ಟಿರುವ ಸೌಲಭ್ಯದಿಂದ ಸಮಾಜ ವಂಚಿತವಾಗಿದೆ. ಅವರಿಗೆ ನ್ಯಾಯ ಒದಗಿಸಿಕೊಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಎಲ್ಲ ಮಠಾಧೀಶರು ಸೇರಿ ಈ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಒಬಿಸಿ ಮಾನ್ಯತೆ ನೀಡುವ ಮೂಲಕ ವೀರಶೈವ ಲಿಂಗಾಯತ ಸಮಾಜಕ್ಕೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಗೂ ಮುನ್ನ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಜಿಲ್ಲಾಧಿಕಾರಿ ಕಚೇರಿವರೆಗೆಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ, ಜಡೇ ಮಠದ ಮಹಾಂತೇಶ ಸ್ವಾಮೀಜಿ, ಬಿಳಕಿ ಮಠದ ರಾಚೋಟೇಶ್ವರ ಹಾಗೂ ತೊಗರ್ಸಿ ಮಠದ ಸ್ವಾಮೀಜಿ ಪಾಲ್ಗೊಂಡಿದ್ದರು.

ಸಮಾಜದ ಮುಖಂಡರಾದ ರುದ್ರಮುನಿ ಸಜ್ಜನ್, ಎನ್.ಜೆ.ರಾಜಶೇಖರ್, ಎಸ್.ಎಸ್.ಜ್ಯೋತಿಪ್ರಕಾಶ್, ಎಚ್.ಸಿ.ಯೋಗೀಶ್, ರಾಜಶೇಖರ್, ಅನಿತಾ ರವಿಶಂಕರ್, ಎಸ್.ಪಿ.ದಿನೇಶ್, ಆನಂದವಾಲಿ, ಮಹೇಶ್ ಮೂರ್ತಿ, ವೈ.ಎಚ್.ನಾಗರಾಜ್, ಟಿ.ಬಿ.ಜಗದೀಶ್, ಎಚ್.ಪಿ.ಗಿರೀಶ್, ಎಚ್.ಬಿ.ದಿನೇಶ್, ಮಹೇಶ್ ಮೂರ್ತಿ ಸಿ, ಬೆನಕಪ್ಪ, ಆನಂದಮೂರ್ತಿ, ರೇಣುಕಾ ನಾಗರಾಜ್, ಜಯಣ್ಣ, ರುದ್ರಮುನಿ, ವೀರಮ್ಮ, ಹರ್ಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.