ADVERTISEMENT

ಅಡಿಕೆ ಬೆಲೆ ಕುಸಿತ ತಪ್ಪಿಸಿ; ಪರಿಹಾರ ವಿತರಿಸಿ

ಆವಿನಹಳ್ಳಿಯಿಂದ ಸಾಗರದವರೆಗೆ ಪಾದಯಾತ್ರೆ ನಡೆಸಿದ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 5:31 IST
Last Updated 18 ನವೆಂಬರ್ 2022, 5:31 IST
ಸಾಗರದ ರೈತ ಹಾಗೂ ಕೂಲಿ ಕಾರ್ಮಿಕ ಹಿತರಕ್ಷಣಾ ವೇದಿಕೆ ವತಿಯಿಂದ ಅಡಿಕೆ ಆಮದು ನೀತಿಯಿಂದ ಬೆಲೆ ಕುಸಿತ ತಡೆಗಟ್ಟಲು ಹಾಗೂ ಎಲೆಚುಕ್ಕಿ ರೋಗದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ವಿತರಿಸಲು ಒತ್ತಾಯಿಸಿ ಗುರುವಾರ ಆವಿನಹಳ್ಳಿಯಿಂದ ಸಾಗರದವರೆಗೆ ಪಾದಯಾತ್ರೆ ನಡೆಯಿತು.
ಸಾಗರದ ರೈತ ಹಾಗೂ ಕೂಲಿ ಕಾರ್ಮಿಕ ಹಿತರಕ್ಷಣಾ ವೇದಿಕೆ ವತಿಯಿಂದ ಅಡಿಕೆ ಆಮದು ನೀತಿಯಿಂದ ಬೆಲೆ ಕುಸಿತ ತಡೆಗಟ್ಟಲು ಹಾಗೂ ಎಲೆಚುಕ್ಕಿ ರೋಗದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ವಿತರಿಸಲು ಒತ್ತಾಯಿಸಿ ಗುರುವಾರ ಆವಿನಹಳ್ಳಿಯಿಂದ ಸಾಗರದವರೆಗೆ ಪಾದಯಾತ್ರೆ ನಡೆಯಿತು.   

ಸಾಗರ: ಇಲ್ಲಿನ ರೈತ ಹಾಗೂ ಕೂಲಿ ಕಾರ್ಮಿಕ ಹಿತರಕ್ಷಣಾ ವೇದಿಕೆ ವತಿಯಿಂದ ಅಡಿಕೆ ಆಮದು ನೀತಿಯಿಂದ ಬೆಲೆ ಕುಸಿತ ತಡೆಗಟ್ಟಲು ಹಾಗೂ ಎಲೆಚುಕ್ಕಿ ರೋಗದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ವಿತರಿಸಲು ಒತ್ತಾಯಿಸಿ ಗುರುವಾರ ಆವಿನಹಳ್ಳಿಯಿಂದ ಸಾಗರದ ವರೆಗೆ ಪಾದಯಾತ್ರೆ ನಡೆಯಿತು.

ಪಾದಯಾತ್ರೆಗೆ ಚಾಲನೆ ನೀಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ‘ಎಲೆಚುಕ್ಕಿ ರೋಗದಿಂದಾಗಿ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಈವರೆಗೆ ಬರುತ್ತಿದ್ದ ರೋಗಗಳಿಂದ ಬೆಳೆಗೆ ತೊಂದರೆ ಉಂಟಾಗುತ್ತಿತ್ತು. ಆದರೆ ಈಗ ತೋಟದ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಮಲೆನಾಡಿನ ಆರ್ಥಿಕತೆ ಅಡಿಕೆ ಮಾರುಕಟ್ಟೆಯನ್ನೇ ಅವಲಂಬಿಸಿದೆ. ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ಬೆಲೆ ಇದ್ದರೆ ಮಾತ್ರ ಇತರ ವಹಿವಾಟುಗಳು ಕೂಡ ಚೆನ್ನಾಗಿ ನಡೆಯುತ್ತದೆ. ಆದರೆ ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿದ ನಂತರ ಅಡಿಕೆ ಬೆಲೆ ಕುಸಿಯುತ್ತಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ’ ಎಂದರು.

ADVERTISEMENT

‘ಕೇರಳದ ಕಾಸರಗೋಡು ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಅಡಿಕೆ ಮರದ ಹೆಡೆಗಳಿಗೆ ಔಷಧ ಸಿಂಪಡಿಸಲು ಹೇಳಿರುವುದು ತೀರಾ ಅವೈಜ್ಞಾನಿಕ ಕ್ರಮವಾಗಿದೆ. ಈ ರೀತಿ ಔಷಧ ಸಿಂಪಡಿಸಿದ ನಂತರವೂ ರೋಗ ಹತೋಟಿಗೆ ಬಂದಿಲ್ಲ. ಉನ್ನತಮಟ್ಟದ ಸಂಶೋಧನಾ ಸಂಸ್ಥೆಗೆ ರೋಗ ಮೂಲ ಕಂಡು ಹಿಡಿಯುವ ಜವಾಬ್ದಾರಿ ನೀಡುವ ಜೊತೆಗೆ ಬೆಳೆಗಾರರಿಗೆ ಸರ್ಕಾರವೇ ಉಚಿತವಾಗಿ ಔಷಧ ಪೂರೈಸಬೇಕು’ ಎಂದು ರೈತ ಹಾಗೂ ಕೂಲಿ ಕಾರ್ಮಿಕ ಹಿತರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆಗ್ರಹಿಸಿದರು.

‘ಭೂತಾನ್ ದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿದ ನಂತರ ಕೆಂಪು ಅಡಿಕೆ ಬೆಲೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹10,000, ಸಿಪ್ಪೆಗೋಡು ₹4500 ಕಡಿಮೆಯಾಗಿದೆ. ಆಮದು ಶುಲ್ಕ ಇಲ್ಲದೆ ಕೇಂದ್ರ ಸರ್ಕಾರ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವುದು ಮಲೆನಾಡಿನ ಬೆಳೆಗಾರರಿಗೆ ಮಾಡಿರುವ ಮೋಸವಾಗಿದೆ’ ಎಂದು ದೂರಿದರು.

ಮಲೆನಾಡು ಭೂ ರಹಿತರ ಹೋರಾಟ ವೇದಿಕೆ ಸಂಚಾಲಕ ತೀ.ನ.ಶ್ರೀನಿವಾಸ್, ‘ಅಡಿಕೆಗೆ ಆಮದು ಶುಲ್ಕ ರದ್ದು ಮಾಡಿರುವುದರ ಹಿಂದೆ ಗುಟ್ಕಾ ಕಂಪನಿಗಳ ಲಾಬಿ ಇದೆ. ಕೇಂದ್ರ ಸರ್ಕಾರ ಗುಟ್ಕಾ ಕಂಪನಿಗಳ ಲಾಬಿಗೆ ಮಣಿದಿದೆ. ಈ ಮೂಲಕ ಕಡಿಮೆ ಬೆಲೆಯಲ್ಲಿ ಗುಟ್ಕಾ ಕಂಪನಿಗಳಿಗೆ ಅಡಿಕೆ ಸಿಗುವ ರೀತಿಯಲ್ಲಿ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ’ ಎಂದು ಆರೋಪಿಸಿದರು.

‘ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಷಯದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇದ್ದು ಹಲವು ವರ್ಷಗಳೇ ಕಳೆದಿವೆ. ಕೇಂದ್ರ ಸರ್ಕಾರಕ್ಕೆ ಈ ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿ ಇಲ್ಲವಾಗಿದೆ. ಚುನಾವಣೆ ಸಂದರ್ಭದಲ್ಲಿ ಅಡಿಕೆ ಬೆಳೆಗಾರರಿಗೆ ಸುಳ್ಳು ಆಶ್ವಾಸನೆ ನೀಡಿ ಅವರ ಮತ ಗಿಟ್ಟಿಸಲು ಮುಂದಾಗುವ ರಾಜಕಾರಣಿಗಳು ಅಡಿಕೆ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಿಂದೇಟು ಹಾಕುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ, ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ಆಪ್ಸ್ ಕೋಸ್ ಅಧ್ಯಕ್ಷ ಕೆ.ಎಂ. ಸೂರ್ಯನಾರಾಯಣ, ಪ್ರಮುಖರಾದ ಬಿ.ಎ.ಇಂದೂಧರ, ಎಲ್.ಟಿ.ತಿಮ್ಮಪ್ಪ, ಸ್ವಾಮಿದತ್ತ ಗೌಡ, ಗಣಪತಿ ಹೆನಗೆರೆ, ಮಧುಮಾಲತಿ, ಸುಮಂಗಲಾ ರಾಮಕೃಷ್ಣ, ಜಯಶೀಲ ಗೌಡ, ಸಫಿಯಾ ಅಬೂಬುಕರ್, ನಾಗರಾಜ್ ಮಜ್ಜಿಗೆರೆ, ಮೋಹನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.