ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜವಿಲ್ಲ. ಅದರಿಂದ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರಿಗಷ್ಟೇ ಲಾಭ ಎಂದು ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತ ಸಂಘ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಶುಕ್ರವಾರ ಬೆಂಬಲ ಸೂಚಿಸಿ, ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಪಂಪ್ಡ್ ಸ್ಟೋರೇಜ್ ಯೋಜನೆಯ ಸಾಧಕ ಬಾಧಕಗಳ ಕುರಿತು ವಿವರವಾಗಿ ಅಧ್ಯಯನ ಮಾಡಿದ್ದೇನೆ. ₹125 ಖರ್ಚು ಮಾಡಿ ₹100 ಆದಾಯ ಗಳಿಸುವ ಅವೈಜ್ಞಾನಿಕ ಯೋಜನೆ ಇದಾಗಿದೆ’ ಎಂದು ಅಭಿಪ್ರಾಯಪಟ್ಟರು.
ಶರಾವತಿ ನದಿ ಕಣಿವೆ ಈಗಾಗಲೇ ಹಲವು ಯೋಜನೆಗಳ ಭಾರದಿಂದ ಕುಸಿದಿದೆ. ಯಾವುದೆ ಹೊಸ ಯೋಜನೆಯ ಭಾರವನ್ನು ತಡೆದುಕೊಳ್ಳುವ ಧಾರಣಾ ಶಕ್ತಿಯನ್ನು ಕಳೆದುಕೊಂಡಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಂಗ ನಿರ್ಮಿಸಿ ಗುಡ್ಡ ಬಗೆಯುವ ಯೋಜನೆ ಖಂಡಿಯವಾಗಿಯೂ ಪರಿಸರಕ್ಕೆ ಹಾನಿಕಾರಕವಾಗಿದೆ ಎಂದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಆನೆಗುಳಿ ಸುಬ್ರಾವ್, ಅಖಿಲೇಶ್ ಚಿಪ್ಪಳಿ, ತೀ.ನ.ಶ್ರೀನಿವಾಸ್, ಅಶೋಕ್ ಸೂರಮನೆ, ಸುಂದರ್ ಸಿಂಗ್, ಹಿತಕರ ಜೈನ್, ಪರಮೇಶ್ವರ ದೂಗೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.