ADVERTISEMENT

ಸರ್ಕಾರ ಪುರಂದರದಾಸರ ಪ್ರಾಧಿಕಾರ ರಚಿಸಲಿ: ನಿರ್ಮಲಾನಂದನಾಥ ಸ್ವಾಮೀಜಿ

ಆರಗದಲ್ಲಿ ಪುರಂದರದಾಸರ ಕೀರ್ತನೋತ್ಸವ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:38 IST
Last Updated 5 ನವೆಂಬರ್ 2025, 6:38 IST
ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿ ಮಂಗಳವಾರ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ 35ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ದಾಸವರೇಣ್ಯ ಪುರಂದರದಾಸರ ಕೀರ್ತನೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು 
ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿ ಮಂಗಳವಾರ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ 35ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ದಾಸವರೇಣ್ಯ ಪುರಂದರದಾಸರ ಕೀರ್ತನೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು    

ತೀರ್ಥಹಳ್ಳಿ: ‘ಜ್ಞಾನಕ್ಕೆ ವೇದ, ಮಂತ್ರ, ನಾದ, ಆತ್ಮ ಸ್ವಾದ್ಯಾಯಗಳೆಂಬ ನಾಲ್ಕು ಮಾರ್ಗಗಳಿವೆ. ಪುರಂದರದಾಸರು ನಾದೋಪಾಸನೆ ಮಾರ್ಗದ ಮೂಲಕ ಭಗವಂತನನ್ನು ಸಮೀಕರಿಸಿದರು. ಕರ್ನಾಟಕ ಸಂಗೀತಕ್ಕೆ ದಿಕ್ಕು ನೀಡಿದ ಪುರಂದರದಾಸರ ಹೆಸರಿನಲ್ಲಿ ಸರ್ಕಾರ ಪ್ರಾಧಿಕಾರ ಸ್ಥಾಪಿಸಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಒತ್ತಾಯಿಸಿದರು.

ಆರಗದ ಸಹಕಾರ ಸಂಘದ ಸಭಾಭವನದಲ್ಲಿ ಮಂಗಳವಾರ ನಡೆದ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ 35ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ದಾಸವರೇಣ್ಯ ಪುರಂದರದಾಸರ ಕೀರ್ತನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶ್ರಮವಹಿಸಿ ಉತ್ಖನನ ನಡೆಸಿದರೆ ಚಿನ್ನ ಲಭಿಸುತ್ತದೆ. ಯೂರೇನಿಯಂ ವರ್ಷವಿಡಿ ಬೆಳಕು ನೀಡುವ ಶಕ್ತಿ ಹೊಂದಿದೆ. ಅದೇ ಸಣ್ಣ ತುಂಡಿನಿಂದ ಬಾಂಬ್‌ ಕೂಡ ಮಾಡಬಹುದು. ಸರಳತೆ ಸಾಮಾನ್ಯ ಸ್ಥಿತಿಯಲ್ಲ. ಸರಳವೆಂದು ನಾವು ಅಂದುಕೊಂಡರೆ ಅದರಿಂದ ಕಟ್ಟಬಹುದು ಅಥವಾ ಕೆಡವಲೂಬಹುದು. ಅಧ್ಯಾತ್ಮದ ಹಸಿವು ಕೂಡ ಕಷ್ಟ. ನವಕೋಟಿ ನಾರಾಯಣ ಆಗರ್ಭ ಶ್ರೀಮಂತಿಕೆ ತೊರೆದ ಪರಿ ಹೀಗೆ’ ಎಂದು ವರ್ಣಿಸಿದರು.

ADVERTISEMENT

‘ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮ ಪರಸ್ಪರ ಹೊಂದಾಣಿಕೆ ಇದೆ. ಒಂದನ್ನು ಬಿಟ್ಟು ಮತ್ತೊಂದು ಇರಲು ಸಾಧ್ಯವಿಲ್ಲ. ಲಕ್ಷಾಂತರ ಕೀರ್ತನೆಗಳು ಸರಳ ಜೀವನ ಮಾರ್ಗವನ್ನು ತೋರಿಸುವ ಜೊತೆಗೆ ಇಂದಿಗೂ ಪ್ರಸ್ತುತವಾಗಿದೆ. 14ನೇ ಶತಮಾನದಲ್ಲಿ ಸಮಕಾಲೀನ ಇತಿಹಾಸ ಗಮನಿಸಿದರೆ ಭಾರತ ಎಷ್ಟು ಪ್ರಭುದ್ಧವಾಗಿ ಯೋಚಿಸುತ್ತಿತ್ತು ಎಂಬುದನ್ನು ಕೀರ್ತನೆಗಳು ತಿಳಿಸುತ್ತವೆ’ ಎಂದರು.

‘ವಿಜಯನಗರ ಸಾಮ್ರಾಜ್ಯದಲ್ಲಿ ವಜ್ರ, ವೈಡೂರ್ಯಗಳ ವ್ಯಾಪಾರ ನಡೆಯುವ ಹೊತ್ತಿಗೆ ಅಮೆರಿಕ ದೇಶ ಹುಟ್ಟಿರಲಿಲ್ಲ. ವಿಶ್ವದಾದ್ಯಂತ ಪುರಂದರರ ಸಮಕಾಲೀನರು ಅನ್ವೇಷಣೆಗೆ ಹೊರಡುವ ಹೊತ್ತಿಗೆ ಸೃಷ್ಟಿಸಿದ ಪದ್ಯಗಳು ಇಂದಿಗೂ ವಿಜ್ಞಾನಕ್ಕೆ ಸವಾಲಾಗುವಂತಿವೆ. ಅಷ್ಟೊಂದು ವೈಜ್ಞಾನಿಕವಾಗಿ ದಾಸ ಸಾಹಿತ್ಯ ರಚನೆಯಾಗಿದೆ. ಆರಗ ಗ್ರಾಮದ ಐತಿಹ್ಯ ಇಂದಿಗೂ ಸ್ಮರಣೀಯ. ಶಾಂತವೇರಿ ಗೋಪಾಲಗೌಡರನ್ನು ದೆಹಲಿಯಲ್ಲಿಯೂ ನೆನಪಿಸುತ್ತಾರೆ’ ಎಂದು ಹೇಳಿದರು.

‘ಜಿಪುಣನಾಗಿದ್ದ ಶ್ರೀನಿವಾಸ ನಾಯಕನಿಗೆ ಭಗವಂತ ಹೆಂಡತಿಯ ಮೂಲಕ ಸತ್ಯದರ್ಶನ ಮಾಡಿದ್ದಾರೆ. ಶ್ರೀಮಂತಿಕೆ ತೊರೆದು ವಿಜಯನಗರ ಸಾಮ್ರಾಜ್ಯ ಸೇರಿದ ಪುರಂದರರು ಕೀರ್ತನೆಗಳ ಮೂಲಕ ಭಕ್ತಿ ಮಾರ್ಗವನ್ನು ಉಪಾಸನೆ ಮಾಡಿದರು. ಸಮಕಾಲೀನ ಬದುಕಿನ ಜಂಜಾಟದಿಂದ ಮುಕ್ತಿಯ ಮಾರ್ಗಕ್ಕೆ ಸೇರಿಸಿದರು. ತಾವು ಜ್ಞಾನದ ದಾರಿಯಲ್ಲಿ ನಡೆಯುವ ಜೊತೆಗೆ ಹಿಂದೆ ಉಳಿದವರನ್ನು ಕೈಹಿಡಿದು ನಡೆಸಿದರು. ಅಧ್ಯಾತ್ಮಕ್ಕೆ ಬದುಕನ್ನು ಸರಳವಾಗಿ ನಡೆಸುವ ಶಕ್ತಿ ಇದೆ’ ಎಂದು ತಿಳಿಸಿದರು.

‘ವಚನ, ದಾಸ ಸಾಹಿತ್ಯಕ್ಕೆ ಸಾಮ್ಯತೆ ಕಾಣಬಹುದು. ಶರಣರ ದಾರಿ ಅನೇಕವಿದ್ದರೂ ಗುರಿ ಒಂದೇ ಆಗಿದೆ. ಸನ್ಮಾರ್ಗದ ದಾರಿಯಲ್ಲಿ ಸಾಗಿದಾಗ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ. ಧರ್ಮ, ಸಂಸ್ಕೃತಿ ಚಿಂತನೆಗಳಿಂದ ಜನಪರ ಕಾಳಜಿಗಳನ್ನು ಬೆಳೆಸಿಕೊಳ್ಳಬೇಕು. ಅಧ್ಯಾತ್ಮ ಇಲ್ಲದೆ ವಿಜ್ಞಾನ ಕುರುಡಾಗುತ್ತದೆ. ವಿಜ್ಞಾನ ಇಲ್ಲದೆ ಅಧ್ಯಾತ್ಮ ಕುಂಟಾಗುತ್ತದೆ. ಎರಡೂ ಸೇರಿಕೊಂಡಾಗ ಜೀವನ ಸಾಗುತ್ತದೆ’ ಎಂದು ಬೆಕ್ಕಿನಕಲ್ಮಠ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ, ಶಿವಮೊಗ್ಗ ಶಾಸಕ ಚನ್ನಬಸಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲು ಧರ್ಮೇಶ್‌ ಮಾತನಾಡಿದರು.

ವಿವಿಧ ಮಠಗಳ ಸ್ವಾಮೀಜಿಗಳು ಇದ್ದರು. ವೇದಿಕೆ ಕಾರ್ಯಕ್ರಮದ ನಂತರ ಕೀರ್ತನೋತ್ಸವ ನಡೆಯಿತು.  

ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿ ಮಂಗಳವಾರ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ 35ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ದಾಸವರೇಣ್ಯ ಪುರಂದರದಾಸರ ಕೀರ್ತನೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಿತು 
ಪುರಂದರ ದಾಸರ ಹುಟ್ಟೂರು ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ರಯತ್ನ ನಡೆಸಬೇಕು. ಹುಟ್ಟೂರು ಪ್ರಸ್ತಾಪಿಸಿದ ಮಾಜಿ ಶಾಸಕ ಪಟಮಕ್ಕಿ ರತ್ನಾಕರ್‌ ಹೇಳಿಕೆಯನ್ನು ಮೊದಲು ಲಘುವಾಗಿ ಪರಿಗಣಿಸಿದ್ದೆ. ಆದರೆ ಅದೀಗ ನಿಜವಾಗಿದೆ.
– ಆರಗ ಜ್ಞಾನೇಂದ್ರ, ಶಾಸಕ
ಧರ್ಮ ಜಾತಿ ಆಧರಿಸಿ ಸಮಾಜದ ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳಿಂದ ಎಲ್ಲರನ್ನೂ ಒಗ್ಗೂಡಿಸಲು ಆಗುವುದಿಲ್ಲ. ಮನುಷ್ಯ ಸಂಬಂಧ ಗಟ್ಟಿಗೊಳಿಸಲು ದಾರ್ಶನಿಕರು ಧರ್ಮಗುರುಗಳಿಂದ ಸಾಧ್ಯ. ಪುರಂದರದಾಸರ ಕೀರ್ತನೆಗೆ ಅಂತಹ ಶಕ್ತಿ ಇದೆ.
– ಕಿಮ್ಮನೆ ರತ್ನಾಕರ, ಮಾಜಿ ಸಚಿವ
ಮಾಜಿ ಶಾಸಕ ಪಟಮಕ್ಕಿ ರತ್ನಾಕರ ಹಿರಿಯ ಸಹಕಾರಿ ನಾಯಕ ಬಿ.ಎಸ್.ವಿಶ್ವನಾಥನ್‌ ಪುರಂದರರ ಹುಟ್ಟೂರು ಬಗ್ಗೆ ಅನೇಕ ಸಂಗತಿಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅದರಿಂದ ಶೋಧನಾ ಸಮಿತಿ ರಚಿಸಲು ಸಾಧ್ಯವಾಯಿತು. ಪುರಂದರರ ಹುಟ್ಟೂರು ಬಗ್ಗೆ ಸರ್ಕಾರ ಅಧಿಕೃತ ಆದೇಶ ಪ್ರಕಟಿಸಬೇಕು.
–ಆರ್.ಎಂ.ಮಂಜುನಾಥ ಗೌಡ, ಎಂಎಡಿಬಿ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.