ಶಿವಮೊಗ್ಗ: ‘ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಆಯೋಗದ ವರದಿಯು ದೋಷಪೂರಿತ ಅಂಕಿ–ಅಂಶ ಒಳಗೊಂಡಿದೆ. ಸಮುದಾಯವನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ. ಸಮುದಾಯದವರು ಒಗ್ಗೂಡಬೇಕು’ ಎಂದು ಕಲುಬುರಗಿಯ ಮಾಜಿ ಸಂಸದ ಡಾ.ಉಮೇಶ್ ಜಾಧವ್ ಹೇಳಿದರು.
ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದಿಂದ ಇಲ್ಲಿನ ಬಂಜಾರ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ಮತ್ತು ದಾವಣಗೆರೆ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಂಜಾರ ಯುವ ಸಮಾವೇಶ, ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮುದಾಯದ ವಿರುದ್ಧ ಕೆಲವರು ಒಳಸಂಚು ರೂಪಿಸುತ್ತಿದ್ದಾರೆ. ಶ್ರಮ ಜೀವಿಗಳಾದ ಬಂಜಾರರು ಸಂಸ್ಕೃತಿ, ಸಂಸ್ಕಾರದಿಂದಲೇ ಹೆಸರು ಮಾಡಿದ್ದು, ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ, ಪ್ರೋತ್ಸಾಹಿಸಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಲ್ಲಿ ಹಿಂದೆ ಸರಿಯಕೂಡದು’ ಎಂದರು.
‘ಬಂಜಾರರು ಸ್ವಾಭಿಮಾನಿ ಹಾಗೂ ಅತ್ಯಂತ ಶ್ರಮ ಜೀವಿ ವರ್ಗದವರು. ಆದರೆ, ಒಳಮೀಸಲಾತಿಯಲ್ಲಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ನಾಗಮೋಹನ್ ದಾಸ್ ಅವರಿಗೆ ಸಮೀಕ್ಷೆ ನಡೆಸಲು ಮಾತ್ರ ಹೇಳಲಾಗಿತ್ತು. ಆದರೆ, ಇಲ್ಲಿ ಲಂಬಾಣಿಯವರು ಸ್ಪೃಶ್ಯರೊ ಅಥವಾ ಅಸ್ಪೃಶ್ಯರೊ ಎಂದು ತೀರ್ಮಾನಿಸಲು ನಾಗಮೋಹನ್ ದಾಸ್‌ಗೆ ಯಾವುದೇ ಅಧಿಕಾರ ನೀಡಿರಲಿಲ್ಲ. ಈ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಬೇಕು’ ಎಂದು ತಾಂಡಾ ಅಭಿವೃದ್ಧಿ ನಿಗಮದ ರಾಜ್ಯ ಘಟಕದ ಅಧ್ಯಕ್ಷ ಎನ್. ಜಯದೇವನಾಯ್ಕ ಹೇಳಿದರು.
ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದ್ದು, ಅವರಿಗೆ ಉತ್ತಮ ಶಿಕ್ಷಣ, ಸಂಸ್ಕೃತಿ ಹಾಗೂ ಸಂಸ್ಕಾರ ನೀಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ ಎಂದು ಮಾಜಿ ಶಾಸಕಿ ಜಲಜಾ ನಾಯ್ಕ ಹೇಳಿದರು.
ಚಿಂತಕ ಎನ್.ಆರ್.ರಾಜನಾಯ್ಕ ಮಾತನಾಡಿದರು.
ಬಂಜಾರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಕೆ.ಬಿ.ಅಶೋಕ್ ನಾಯ್ಕ, ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಆರ್.ಗಿರೀಶ, ಪ್ರಮುಖರಾದ ಆಯನೂರು ಶಿವನಾಯ್ಕ, ಮಾರುತಿ ನಾಯ್ಕ, ಮಂಜುನಾಥ, ವಸಂತ ನಾಯ್ಕ, ಉಷಾ ನಾಯ್ಕ, ಮಂಜುಳಾ ಬಾಯಿ, ಟೀಕ್ಯಾನಾಯ್ಕ, ಪುಷ್ಪಾ ಬಾಯಿ, ದೇವರಾಜ್ ಮಂಡೇನಕೊಪ್ಪ ಇದ್ದರು.
ಜಿಲ್ಲೆಯು ಕ್ರಾಂತಿಯ ಭೂಮಿ. ವಿಧಾನಸೌಧಕ್ಕೆ ‘ಹೆಡ್ ಮಾಸ್ಟರ್’ ಆಗಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ನನ್ನ ಗುರು. ಅವರಿಂದ ಬಳಷ್ಟು ಕಲಿತಿದ್ದೇನೆ. ದಾರ್ಶನಿಕ ಸಂತ ಸೇವಾಲಾಲ್ ಅವರ ಕ್ಷೇತ್ರ ಸೂರಗೊಂಡನಕೊಪ್ಪವನ್ನು ಬಂಜಾರ ಸಮುದಾಯದವರ ‘ಕಂಟ್ರೋಲ್ ಸೆಂಟರ್’ ಆಗಿ ಬೆಳೆಸಬೇಕು. ಅಲ್ಲಿನ ಬೆಳವಣಿಗೆಯು ದೇಶ ವ್ಯಾಪಿ ಪಸರಿಸುವ ಕಾರ್ಯ ಆಗಬೇಕು’ ಎಂದು ಮಾಜಿ ಸಂಸದ ಡಾ.ಉಮೇಶ್ ಜಾದವ್ ಹೇಳಿದರು.
ಬಂಜಾರ ಸಮುದಾಯ ಸೇರಿದಂತೆ ಶೋಷಿತ ಸಮುದಾಯಗಳ ಇತಿಹಾಸವನ್ನು ಈ ವ್ಯವಸ್ಥೆ ಮುಚ್ಚಿಹಾಕಿದೆ. ಇದನ್ನು ಹೊರ ತರಲು ಚಳವಳಿಯ ಶಿಕ್ಷಣ ಬೇಕು ಎಂದು ನಟ ಚೇತನ್ ಅಹಿಂಸಾ ಹೇಳಿದರು. ಪಠ್ಯ ಪುಸ್ತಕದ ಶಿಕ್ಷಣವು ಆಳುವ ಶಕ್ತಿಗಳಿಂದ ರಚಿಸಲ್ಪಟ್ಟಿದೆ. ತಮ್ಮ ಮೂಗಿನ ನೇರಕ್ಕೆ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ನಾಗರಿಕ ಸಮಾಜದಲ್ಲಿ ಒಂದು ಉದ್ಯೋಗ ಪಡೆಯಲಷ್ಟೇ ಸಾಧ್ಯ. ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ. ಲಂಬಾಣಿ ಭಾಷೆಗೆ ಲಿಪಿ ಇಲ್ಲ. ಆದರೆ ಅದು ಮೌಖಿಕವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಸಮುದಾಯದ ಸಂಸ್ಕೃತಿ ಉಳಿವಿಗೆ ಲಿಪಿಯನ್ನು ಕಂಡುಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.