ಸಾಗರ: ಇಲ್ಲಿನ ರಾಘವೇಶ್ವರ ಭಾರತೀ ಸಭಾಭವನದಲ್ಲಿ ಸೆ.22 ರಿಂದ ಅ.4ರ ವರೆಗೆ ‘ನವರಾತ್ರ ನಮಸ್ಯಾ’ ಕಾರ್ಯಕ್ರಮ ನಡೆಯಲಿದ್ದು, ಸೆ. 20 ರಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪುರಪ್ರವೇಶ ಮಾಡಲಿದ್ದಾರೆ.
ಸಂಜೆ 5.30 ಕ್ಕೆ ನಗರ ಪೊಲೀಸ್ ಠಾಣೆ ಎದುರಿನ ಶಾರದಾಂಬಾ ವೃತ್ತದಲ್ಲಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ನಂತರ ಗಣಪತಿ ದೇವಸ್ಥಾನದವರೆಗೂ ಮೆರವಣಿಗೆ ಆಯೋಜಿಸಲಾಗಿದೆ.
ವಿವಿಧ ಕಲಾ ತಂಡಗಳಿಂದ ನಾದಸ್ವರ, ಚಂಡೆ ವಾದನ, ಶಿರೂರಿನ ಪರಿಣಿತ ಕಲಾವಿದರಿಂದ ನೃತ್ಯ ಭಜನೆ, ಶ್ರೀರಾಮನ ಆಕೃತಿಯ ವಿಶೇಷ ಮೂರ್ತಿಯೊಂದಿಗೆ ಮೆರವಣಿಗೆ ಸಾಗಲಿದೆ ಎಂದು ಪುರ ಪ್ರವೇಶ ಮತ್ತು ನಗರಾಲಂಕಾರ ಸಂಚಾಲಕ ಕೆ.ಆರ್.ಗಣೇಶ್ ಪ್ರಸಾದ್ ತಿಳಿಸಿದ್ದಾರೆ.
ಇದೇ ಪ್ರಥಮ ಬಾರಿಗೆ ಇಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಾಗರ, ಹೊಸನಗರ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕುಗಳ ಶಿಷ್ಯ ಭಕ್ತರ ಸಮಿತಿ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದು ಅಂತಿಮ ಹಂತಕ್ಕೆ ತಲುಪಿದೆ. ಕಳೆದ ಒಂದೂವರೆ ತಿಂಗಳಿನಿಂದ ಅಕ್ಷತಾಭಿಯಾನದ ಮೂಲಕ ಸಮಸ್ತರನ್ನು ಆಹ್ವಾನಿಸುವ ಅಭಿಯಾನ ನಡೆದಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಧಾರ್ಮಿಕ, ಸಾಂಸ್ಕೃತಿಕ, ಶಬರಿ ಆತಿಥ್ಯ, ಪ್ರಸಾದ ವಿತರಣೆ ಹೀಗೆ ಒಟ್ಟು 14 ವಿಭಾಗಕ್ಕೆ ಸಂಚಾಲಕರನ್ನು ನೇಮಕ ಮಾಡಲಾಗಿದ್ದು, 500 ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಪ್ರಸಾದ ಭೋಜನಕ್ಕೆ ಹೊರ ಕಾಣಿಕೆ ಸಂಗ್ರಹವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಅಂತಿಮ ಹಂತದ ಸಿದ್ದತೆಯನ್ನು ಶುಕ್ರವಾರ ಶಾಸಕ ಗೋಪಾಲಕೃಷ್ಣ ಬೇಳೂರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸೇರಿದಂತೆ ಹಲವು ಗಣ್ಯರು ವೀಕ್ಷಿಸಿದರು.
ಪ್ರಮುಖರಾದ ಮುರಳಿ ಗೀಜಗಾರು, ಶಿವರಾಮಯ್ಯ, ಪ್ರಸನ್ನ ಹೆಗಡೆ ಕೆರೆಕೈ, ಗುರುಪಾದ ಭೀಮನಕೋಣೆ, ರಮೇಶ್ ಹೆಗಡೆ ಗುಂಡೂಮನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.