ADVERTISEMENT

ಲಿಂಗನಮಕ್ಕಿ ಅಣೆಕಟ್ಟೆಯಿಂದ 30 ಸಾವಿರ ಕ್ಯುಸೆಕ್ ನೀರು ಹೊರಕ್ಕೆ

ಆಗುಂಬೆ ಘಾಟಿಯಲ್ಲಿ ಸಂಚಾರ ನಿಷೇಧ, ಎರಡು ಕಡೆ ಧರೆ ಕುಸಿತ, ಅಪಾಯದ ಮಟ್ಟ ಮೀರಿದ ನದಿಗಳು, ಶಿವಮೊಗ್ಗದಲ್ಲಿ ಗಂಜಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2018, 14:39 IST
Last Updated 14 ಆಗಸ್ಟ್ 2018, 14:39 IST
   

ಶಿವಮೊಗ್ಗ:ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸುಮಾರು ಒಂದು ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯ ಗರಿಷ್ಠಮಟ್ಟ (1819 ಅಡಿ) ತಲುಪುತ್ತಿರುವ ಕಾರಣ ಮಂಗಳವಾರ 11 ಕ್ರಸ್ಟ್‌ಗೇಟ್‌ ತೆರೆದು 30 ಸಾವಿರ ಕ್ಯುಸೆಕ್ ನೀರು ಶರಾವತಿ ನದಿಗೆ ಹರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಮಂಗಳವಾರವೂ ಮಳೆಯ ಆರ್ಭಟ ಮುಂದುವರಿದಿದೆ. ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಹಲವು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು,ಜನಜೀವನ ಅಸ್ತವ್ಯಸ್ತಗೊಂಡಿದೆ.

ತುಂಗಾ ಜಲಾಶಯದಿಂದ ಹಲವುವರ್ಷಗಳ ಬಳಿಕ ಒಂದೇ ಬಾರಿ90 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸುತ್ತಿದ್ದು, ಶಿವಮೊಗ್ಗ ನಗರದ ಸೀಗೆಹಟ್ಟಿ, ಕುಂಬಾರ ಗುಂಡಿ, ಮಂಡಕ್ಕಿಬಟ್ಟಿ, ಕನಕದಾಸ ಉದ್ಯಾನ, ಜೆಪಿಎನ್‌ ಶಾಲೆ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡಿವೆ.

ADVERTISEMENT

ಕೆಲವು ಮನೆಗಳಿಗೆ ನೀರು ನುಗ್ಗಿ ದವಸ–ಧಾನ್ಯ, ಪೀಠೋಪಕರಣಗಳು ನೀರಿನಲ್ಲಿ ಮುಳುಗಿಹೋಗಿವೆ. ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಗಂಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಸೂಚಿಸಿದೆ.

ಭದ್ರಾ ಜಲಾಶಯದಿಂದ ಮಂಗಳವಾರ ಸಂಜೆ ವೇಳೆಗೆ 70 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಿದ್ದು, ಭದ್ರಾವತಿ ಹೊಸ ಸೇತುವೆ ಮೇಲೆ 4 ಅಡಿ ನೀರು ಹರಿಯುತ್ತಿದೆ. ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಎರಡೂ ಜಲಾಶಯಗಳಿಂದ 1.60 ಲಕ್ಷ ಕ್ಯುಸೆಕ್ ನೀರು ತುಂಗಭದ್ರಾ ನದಿಗೆ ಹರಿದು ಹೋಗುತ್ತಿದೆ. ಇದರಿಂದ ಹಲವು ಗ್ರಾಮಗಳ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ.

ಶರಾವತಿ, ಮಾಲತಿ, ವರದಾ ಸೇರಿದಂತೆ ಎಲ್ಲಾ ನದಿಗಳೂ ಅಪಾಯದಮಟ್ಟ ಮೀರಿ ಹರಿಯುತ್ತಿವೆ.

ನಾಲ್ಕು ತಾಲ್ಲೂಕುಗಳಿಗೆ ರಜೆ:
ತೀರ್ಥಹಳ್ಳಿ, ಸಾಗರ, ಹೊಸನಗರ, ಸೊರಬ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ. ಶಾಲೆಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ.

ಆಗುಂಬೆ ಘಾಟಿ ಸಂಚಾರ ಬಂದ್‌:
ಭಾರಿ ಮಳೆ ಹಾಗೂ ತೀರ್ಥಹಳ್ಳಿ–ಕುಂದಾಪುರ ರಸ್ತೆಯಲ್ಲಿ ಧರೆ ಕುಸಿದ ಪರಿಣಾಮ ಆಗುಂಬೆ ಘಾಟಿಯಲ್ಲಿ ಎಲ್ಲ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.

ಯಡೂರು–ಮಾಸ್ತಿಕಟ್ಟೆ ಮಧ್ಯದ ಉಳುಕೊಪ್ಪದ ಬಳಿ ಗುಡ್ಡ ಕುಸಿದಿದ್ದು, ಹಲವು ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.