ಶಿವಮೊಗ್ಗ: ಮೂರು ದಿನಗಳು ಸತತ ಸುರಿದ ಮಳೆ ಶುಕ್ರವಾರ ಬಿಡುವುದು ನೀಡಿದ್ದು, ಲಾಕ್‌ಡೌನ್ ಮಧ್ಯೆಯೂ ಮುಂಜಾನೆ ಅಗತ್ಯ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದರು.
ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಸಾಮಗ್ರಿ ಖರೀದಿಸಲು ಬೆಳಿಗ್ಗೆ 6ರಿಂದ 9ರವರೆಗೆ ಅವಕಾಶ ಕಲ್ಪಿಸಲಾಗಿದ್ದರೂ ಮಳೆಯ ಕಾರಣ ಮೂರು ದಿನಗಳಿಂದ ಖರೀದಿಗೆ ಅವಕಾಶವೇ ಸಿಕ್ಕಿರಲಿಲ್ಲ.
ತುಂಗಾ ಜಲಾಶಯಕ್ಕೆ 31,277 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದ ಬಳಿ ತುಂಗಾ ನದಿ ತುಂಬಿ ಹರಿಯುತ್ತಿದೆ. ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗಬಹುದು ಎಂಬ ಆತಂಕದಲ್ಲಿ ನಗರದ ತಗ್ಗು ಪ್ರದೇಶಗಳ ಜನರು ರಾತ್ರಿ ನಿದ್ದೆ ಮಾಡದೇ ಕಳೆದಿದ್ದರು. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮೂರು ವರ್ಷಗಳ ಹಿಂದೆ ಸುರಿದ ಮಳೆಗೆ ತುಂಗಾ ನದಿ ಉಕ್ಕಿ ಹರಿದು ಹಲವು ಬಡಾವಣೆಗಳು ಜಲಾವೃತವಾಗಿದ್ದವು. ಐದು ಸಾವಿರ ಜನರು ನಿರಾಶ್ರಿತರಾಗಿದ್ದರು.
ರಾಜಕಾಲುವೆ ಹೂಳು ತೆಗೆಸಲು ಕ್ರಮ:
ನಗರದ ಬಾಪೂಜಿ ನಗರ, ವೆಂಕಟೇಶ್ ನಗರ, ಸೀಗೆಹಟ್ಟಿ, ಹಿಮಾಮ್‌ಬಾಡ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್ ಸನೀತಾ ಅಣ್ಣಪ್ಪ, ರಾಜಕಾಲುವೆಗಳ ಹೂಳು ತೆಗೆಸಿ ಮಳೆಯ ನೀರು ಸರಾಗವಾಗಿ ಹರಿಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜಕಾಲುವೆಗಳಲ್ಲಿ ಸಹಜವಾಗಿ ಗಿಡ ಗಂಟೆಗಳು ಬೆಳೆದುಕೊಂಡಿವೆ. ಪ್ಲಾಸ್ಟಿಕ್ ಸೇರಿಕೊಂಡು ನೀರು ಸರಾಗವಾಗಿ ಹರಿಯಲು ತೊಡಕಾಗಿದೆ. ಕೆಲವು ಕಡೆ ಹೂಳು ತುಂಬಿಕೊಂಡಿದೆ. ಇದರಿಂದ ಮಳೆಗಾಲದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಎರಡು ದಿನಗಳಿಂದ ರಾಜಕಾಲುವೆಗಳ ವೀಕ್ಷಣೆ ಮಾಡಿ ಅಗತ್ಯಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ ಮಾತನಾಡಿ, ರಾಜಕಾಲುವೆ ದುರಸ್ತಿ ಮಾಡಿಲ್ಲ. ರಾಜಕಾಲುವೆಗೆ ಸೇರುವ ಚರಂಡಿಗಳೂ ಹೂಳಿನಿಂದ ತುಂಬಿಹೋಗಿವೆ. ಸರಾಗವಾಗಿ ನೀರು ಹರಿಯುತ್ತಿಲ್ಲ. ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಉಪ ಮೇಯರ್ ಶಂಕರ್‌ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ, ಶಿವಕುಮಾರ್, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ರಮೇಶ್ ಹೆಗ್ಡೆ, ಆರತಿ ಅ.ಮಾ.ಪ್ರಕಾಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.